ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ ಸಂಬಂಧ ನಕಲಿ ಖಾತೆಗಳ ಮಾಹಿತಿ ಕೋರಿ ಮೆಟಾ ಕಂಪನಿಗೆ ಸಿಸಿಬಿ ಪತ್ರ ಬರೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ ಸಂಬಂಧ ನಕಲಿ ಖಾತೆಗಳ ಮಾಹಿತಿ ಕೋರಿ ಮೆಟಾ ಕಂಪನಿಗೆ ಸಿಸಿಬಿ ಪತ್ರ ಬರೆದಿದೆ.ತಮಗೆ ಅಶ್ಲೀಲ ಸಂದೇಶ ಕಳುಹಿಸಿ ನಿಂದಿಸಿದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನ 18 ಖಾತೆಗಳ ಬಗ್ಗೆ ದೂರಿನಲ್ಲಿ ವಿಜಯಲಕ್ಷ್ಮೀ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಮಾಲೀಕತ್ವದ ಮೆಟಾ ಕಂಪನಿಗೆ ಅಧಿಕಾರಿಗಳು ಪತ್ರ ಬರೆದು ಮಾಹಿತಿ ಕೋರಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೊಂದೆಡೆ ಐಪಿ ಅಡ್ರೆಸ್ ಆಧರಿಸಿ ಆರೋಪಿಗಳ ಪತ್ತೆಗೆ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಮೂವರು ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ತಂಡಗಳು ಕಾರ್ಯಾಚರಣೆಗಿಳಿದಿವೆ. ಪ್ರಕರಣ ದಾಖಲಾದ ಬೆನ್ನಲ್ಲೇ ಕೆಲವರು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ. ಈ ಆರೋಪಿಗಳ ಅಡಗುತಾಣಗಳ ಬಗ್ಗೆ ಸುಳಿವು ಪಡೆದು ಸಿಸಿಬಿ ಹುಡುಕಾಟ ನಡೆಸಿದೆ ಎಂದು ಮೂಲಗಳು ಹೇಳಿವೆ.ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಅವಮಾನಿಸಿದ್ದಾರೆ ಎಂದು ಆರೋಪಿಸಿ ಕಿಡಿಗೇಡಿಗಳ ವಿರುದ್ಧ ಸಿಸಿಬಿ ಸೈಬರ್ ಕ್ರೈಂ ಠಾಣೆಗೆ ವಿಜಯಲಕ್ಷ್ಮೀ ಅವರು ದೂರು ನೀಡಿದ್ದರು. ಈ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆ ಶುರು ಮಾಡಿದ್ದಾರೆ.