ಕನ್ನಡಪ್ರಭ ವಾರ್ತೆ ಹಾಸನ
ಹಾಸನ ಮಹಾನಗರಪಾಲಿಕೆಯಲ್ಲಿ ಸಿಸಿಟಿವಿ ಅಳವಡಿಕೆ ವಿಚಾರವಾಗಿ ಉದ್ಭವಿಸಿರುವ ವಿವಾದ ಇದೀಗ ಆಡಳಿತ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಹಾನಗರಪಾಲಿಕೆಯ ಮ್ಯಾನೇಜರ್ ಪ್ರಕಾಶ್ ತಮ್ಮ ಕಚೇರಿಯೊಳಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾವನ್ನು ಕಿತ್ತು ಹಾಕುವಂತೆ ಸಿಬ್ಬಂದಿಗೆ ಸೂಚನೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.ಮಹಾನಗರಪಾಲಿಕೆಯಲ್ಲಿ ಇತ್ತೀಚೆಗೆ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಸಾರ್ವಜನಿಕ ದೂರುಗಳು ಹಾಗೂ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಪಾರದರ್ಶಕತೆ ಮತ್ತು ಮೇಲ್ವಿಚಾರಣೆ ಹೆಚ್ಚಿಸಲು ಸಿಸಿಟಿವಿ ಅಳವಡಿಸುವ ಕ್ರಮ ಕೈಗೊಳ್ಳಲಾಗಿತ್ತು. ಕೆಲವೇ ದಿನಗಳ ಹಿಂದೆ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ ಆಯ್ದ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಸಲು ಸೂಚನೆ ನೀಡಿದ್ದರು. ಆದರೆ, ತಮ್ಮ ಕಚೇರಿಯೊಳಗೆ ಸಿಸಿಟಿವಿ ಅಳವಡಿಸಿರುವುದನ್ನು ಪ್ರಶ್ನಿಸಿದ ಮ್ಯಾನೇಜರ್ ಪ್ರಕಾಶ್, ನನ್ನ ಅನುಮತಿ ಇಲ್ಲದೆ ಹೇಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ? ಸಿಸಿ ಕ್ಯಾಮೆರಾ ಹಾಕಬೇಕಾದರೆ ಎಲ್ಲರ ಕಚೇರಿಗೂ ಹಾಕಿಸಲಿ. ಆಯ್ದ ಕಚೇರಿಗಳಿಗೆ ಮಾತ್ರ ಯಾಕೆ? ಎಂದು ಆಕ್ಷೇಪ ವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿವೆ. ನಂತರ ಅವರ ಸೂಚನೆಯಂತೆ ಸಿಬ್ಬಂದಿ ಸಿಸಿಟಿವಿ ಕ್ಯಾಮೆರಾವನ್ನು ತೆಗೆದುಹಾಕಿದ್ದಾರೆ ಎನ್ನಲಾಗಿದೆ. ಈ ಘಟನೆ ಪಾಲಿಕೆಯಲ್ಲಿ ಪಾರದರ್ಶಕತೆ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದೆ. ಭ್ರಷ್ಟಾಚಾರದ ಆರೋಪಗಳ ನಡುವೆಯೇ ಮೇಲ್ವಿಚಾರಣಾ ವ್ಯವಸ್ಥೆ ಜಾರಿಗೊಳಿಸುವ ಪ್ರಯತ್ನ ನಡೆದ ಸಂದರ್ಭದಲ್ಲಿ ಸಿಸಿ ಕ್ಯಾಮೆರಾ ತೆರವುಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗಿದೆ.ಪಾಲಿಕೆ ವಲಯದಲ್ಲಿ ಕೆಲವರು, ಎಲ್ಲಾ ಕಚೇರಿಗಳಲ್ಲೂ ಸಮಾನವಾಗಿ ಸಿಸಿ ಕ್ಯಾಮೆರಾ ಅಳವಡಿಸಿದರೆ ಉತ್ತಮ. ಆಯ್ದ ಕಚೇರಿಗಳಿಗೆ ಮಾತ್ರ ಅಳವಡಿಸುವುದು ತಪ್ಪು ಸಂದೇಶ ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಪಾರದರ್ಶಕ ಆಡಳಿತಕ್ಕಾಗಿ ಸಿಸಿಟಿವಿ ವ್ಯವಸ್ಥೆ ಅಗತ್ಯ ಎಂಬ ವಾದವೂ ಕೇಳಿಬರುತ್ತಿದೆ. ಈ ಕುರಿತಂತೆ ಮ್ಯಾನೇಜರ್ ಪ್ರಕಾಶ್ ಮಾಧ್ಯಮಕ್ಕೆ ಮಾಹಿತಿ ನೀಡಿ ಪ್ರತಿಕ್ರಿಯಿಸಿ ಈ ಸಿಸಿ ಕ್ಯಾಮರಾ ಹಾಕಿದವರು ಯಾರು ಎಂಬುದು ನಮಗೆ ತಿಳಿಯಬೇಕು ಎಂದು ಒತ್ತಾಯ ಮಾಡಿದರು.