ಮಡಿಕೇರಿ ರಸ್ತೆಯ ಕಕ್ಕೆಹೊಳೆ ಬಳಿಯ ಜಂಕ್ಷನ್ ಹಾಗೂ ಗಾಂಧಿ ವೃತ್ತದ ಬಳಿ ಮೈಮರೆತು ವಾಹನ ಸವಾರ ಮಾಡಿದರೆ ಜೋಕೆ, ತಕ್ಷಣ ಕೇಸು ದಾಖಲಿಸಲು ಸಿಸಿ ಕ್ಯಾಮರ ಕಣ್ಗಾವಲಾಗಿ ತನ್ನ ಕಾರ್ಯವನ್ನು ಸದ್ದಿಲ್ಲದೇ ಆರಂಭಿಸಿದೆ. ಈಗಾಗಲೇ ಒಟ್ಟು ನೂರಕ್ಕೂ ಅಧಿಕ ಕೇಸುಗಳನ್ನು ದಾಖಲಿಸಿದೆ.
ಮುರಳೀಧರ್ ಶಾಂತಳ್ಳಿ
ಕನ್ನಡಪ್ರಭವಾರ್ತೆ ಸೋಮವಾರಪೇಟೆಮಡಿಕೇರಿ ರಸ್ತೆಯ ಕಕ್ಕೆಹೊಳೆ ಬಳಿಯ ಜಂಕ್ಷನ್ ಹಾಗೂ ಗಾಂಧಿ ವೃತ್ತದ ಬಳಿ ಮೈಮರೆತು ವಾಹನ ಸವಾರ ಮಾಡಿದರೆ ಜೋಕೆ, ತಕ್ಷಣ ಕೇಸು ದಾಖಲಿಸಲು ಸಿಸಿ ಕ್ಯಾಮರ ಕಣ್ಗಾವಲಾಗಿ ತನ್ನ ಕಾರ್ಯವನ್ನು ಸದ್ದಿಲ್ಲದೇ ಆರಂಭಿಸಿದೆ. ಈಗಾಗಲೇ ಒಟ್ಟು ನೂರಕ್ಕೂ ಅಧಿಕ ಕೇಸುಗಳನ್ನು ದಾಖಲಿಸಿದೆ.
ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಹಾಗೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸರು ಹೊಸ ವರ್ಷದ ದಿನವೇ ಒಟ್ಟು 81 ಕೇಸ್‌ಗಳನ್ನು ದಾಖಲಿಸಿದ್ದು, jg.90, 500 ದಂಡ ವಿಧಿಸಿದ್ದಾರೆ.ಅಂತೆಯೇ ಸೋಮವಾರಪೇಟೆ ಪಟ್ಟಣದ ಕಕ್ಕೆಹೊಳೆ ಜಂಕ್ಷನ್ ಹಾಗೂ ಮಹಾತ್ಮಗಾಂಧಿ ವೃತ್ತದಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಈ ಕ್ಯಾಮೆರಾಗಳು ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಸವಾರರ ಫೋಟೋಗಳನ್ನು ವಾಹನಗಳ ನಂಬರ್ ಸಹಿತ ಸೆರೆ ಹಿಡಿಯುತ್ತಿವೆ. ಈ ಮೂಲಕವೂ ಠಾಣೆಯಲ್ಲಿಯೇ ಕುಳಿತು ಪೊಲೀಸರು ಮೊಕದ್ದಮೆ ದಾಖಲಿಸಿಕೊಳ್ಳುತ್ತಿದ್ದಾರೆ.
ಈವರೆಗೆ ಪೊಲೀಸರ ಕಣ್ತಪ್ಪಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದವರು, ಪೊಲೀಸರು ಈ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರೆ ಬೇರೊಂದು ರಸ್ತೆಯ ಮೂಲಕ ಎಸ್ಕೇಪ್ ಆಗುತ್ತಿದ್ದ ವಾಹನ ಸವಾರರಿಗೆ ಸವಾಲಾಗಿ ಕಾಡುತ್ತಿದೆ. ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನ ಚಾಲಕರು ಇನ್ನು ಮುಂದೆ ಸಂಚಾರ ನಿಯಮ ಪಾಲನೆಯಿಂದ ತಪ್ಪಿಸಿಕೊಳ್ಳಲು ಕಷ್ಟಸಾಧ್ಯವಾಗಿದೆ. ಇದನ್ನೂ ಮೀರಿದರೆ ಅನಿವಾರ್ಯವಾಗಿ ದಂಡ ಕಟ್ಟಬೇಕಾಗುತ್ತದೆ.ಈವರೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಹಲವಷ್ಟು ಪ್ರಕರಣಗಳಲ್ಲಿ ಪೊಲೀಸರು ಹಿಡಿದರೆ, ಅವರೊಂದಿಗೆ ವಾಗ್ವಾದ ನಡೆಸುವುದು, ರಾಜಕೀಯ ನಾಯಕರುಗಳು, ಪ್ರಭಾವಿಗಳ ಮುಖಾಂತರ ಶಿಫಾರಸ್ಸು ಮಾಡಿಸುವ ಪ್ರಯತ್ನ ಕೆಲವು ಸಲ ನಡೆಯುತ್ತಿತ್ತು. ಇದು ಪೊಲೀಸರು ಮತ್ತು ಪ್ರಭಾವಿಗಳು, ರಾಜಕೀಯ ಮುಖಂಡರಿಗೂ ಇರಿಸು-ಮುರಿಸು ಆಗುತ್ತಿತ್ತು. ಅತ್ತ ಕೇಸ್ ಮಾಡಲೂ ಆಗದೇ ಇತ್ತ ಬಿಟ್ಟು ಕಳುಹಿಸಲೂ ಆಗದ ಸನ್ನಿವೇಶಗಳಿಗೆ ಪೊಲೀಸರು ಸಿಲುಕುತ್ತಿದ್ದರು.ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘನೆಯ ದೃಶ್ಯಗಳನ್ನು ಸಿ.ಸಿ. ಕ್ಯಾಮೆರಾಗಳೇ ಸೆರೆ ಹಿಡಿದು ಠಾಣೆಗೆ ರವಾನಿಸುವುದರಿಂದ ಇಂತಹ ಇರಿಸು ಮುರಿಸಿನಿಂದ ಪೊಲೀಸರು ತಪ್ಪಿಸಿಕೊಳ್ಳುವಂತಾಗಿದೆ. ಠಾಣೆಯಲ್ಲಿಯೇ ಕುಳಿತು ವಾಹನದ ನೋಂದಣಿ ಸಂಖ್ಯೆಯ ಆಧಾರದ ಮೇರೆ ಮಾಲೀಕರಿಗೆ ನೋಟೀಸ್ ಜಾರಿಯಾಗುತ್ತದೆ. ಅವರುಗಳು ಠಾಣೆಗೆ ಅಥವಾ ನ್ಯಾಯಾಲಯಕ್ಕೆ ಹಾಜರಾಗಿ ದಂಡ ಕಟ್ಟಲೇಬೇಕಾಗುತ್ತದೆ.ಬಸ್ ನಿಲ್ಲಿಸಲು ಅವಕಾಶವೇ ಇಲ್ಲ!
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಂತೂ ಬಸ್ ಗಳಿಗೇ ನಿಲ್ಲಿಸಲು ಸ್ಥಳಾವಕಾಶ ಇಲ್ಲದಾಗಿದೆ. ಸಂಜೆಯಂತೂ ಕಾರುಗಳು, ಬೈಕುಗಳನ್ನು ನಿಲ್ಲಿಸುವ ಸ್ಥಳವಾಗಿ ಮಾರ್ಪಾಟಾಗುತ್ತದೆ. ಸಂಜೆ ಬರುವ ಬಸ್ ಗಳಿಗೆ ಬಸ್ ನಿಲ್ದಾಣದಲ್ಲೇ ಸೂಕ್ತ ಸ್ಥಳವಾಕಾಶ ಇಲ್ಲವಾಗಿದೆ. ಖಾಸಗಿ ಬಸ್ ಗಳು ಬಂದು ದಾರಿಯಲ್ಲೇ ಪ್ರಯಾಣಿಕರನ್ನು ಇಳಿಸುವ ಸಂದರ್ಭ ಬಸ್ ನಿಲ್ದಾಣದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಬಸ್ ನ ಹಿಂದೆ ಮುಂದೆ ಬರುವ ವಾಹನಗಳು ಪ್ರಯಾಣಿಕರು ಇಳಿದ ನಂತರವೇ ಮುಂದಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕುರಿತು ಪೊಲೀಸ್ ಇಲಾಖೆ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಸಾರ್ವತ್ರಿಕ ಅಭಿಪ್ರಾಯವಾಗಿದೆ.ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ತಪ್ಪಿದ್ದಲ್ಲಿ ಪೊಲೀಸರು ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿರುವ ಸೋಮವಾರಪೇಟೆ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಮುದ್ದು ಮಾದೇವ ಅವರು, ಸಂಚಾರ ನಿಯಮ ಪಾಲನೆಯಿಂದ ಬೇರೊಬ್ಬರ ಜೀವ ಉಳಿಸುವುದರೊಂದಿಗೆ ನಮ್ಮ ಜೀವ-ಜೀವನವನ್ನೂ ಉಳಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ವಾಹನ ಮಾಲೀಕರು, ಸವಾರರು, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.ಸೋಮವಾರಪೇಟೆ ಪಟ್ಟಣದ ಕಕ್ಕೆ ಹೊಳೆ ಹಾಗೂ ಗಾಂಧಿ ವೃತದಲ್ಲಿ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಿದ್ದು ಈ ಕ್ಯಾಮೆರಾಗಳು ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಸವಾರರ ಫೋಟೋಗಳನ್ನು ವಾಹನಗಳ ನಂಬರ್ ಸಮೇತ ಸೆರೆ ಹಿಡಿಯುವುದರಿಂದ ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು.
। ಮುದ್ದು ಮಾದೇವ, ಸೋಮವಾರಪೇಟೆ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್