ಕನ್ನಡಪ್ರಭ ವಾರ್ತೆ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸಂಬಂಧಿಸಿದಂತೆ ವೈರಲ್ ಆಗಿರುವ ಸಿಸಿಟಿವಿ ದೃಶ್ಯವು ಸುಮಾರು ಒಂದು ತಿಂಗಳ ಹಿಂದಿನದ್ದು ಎಂದು ಬೆಳಗಾವಿ ಬಂಧಿಖಾನೆ ಉತ್ತರ ವಲಯ ಡಿಐಜಿ ಟಿ.ಪಿ.ಶೇಷ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸಂಬಂಧಿಸಿದಂತೆ ವೈರಲ್ ಆಗಿರುವ ಸಿಸಿಟಿವಿ ದೃಶ್ಯವು ಸುಮಾರು ಒಂದು ತಿಂಗಳ ಹಿಂದಿನದ್ದು ಎಂದು ಬೆಳಗಾವಿ ಬಂಧಿಖಾನೆ ಉತ್ತರ ವಲಯ ಡಿಐಜಿ ಟಿ.ಪಿ.ಶೇಷ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೈರಲ್ ಆಗಿರುವ ಸಿಸಿಟಿವಿ ದೃಶ್ಯವನ್ನು ಮೇಲ್ನೋಟಕ್ಕೆ ಪರಿಶೀಲಿಸಿದಾಗ ಅದು ನಮ್ಮ ಸಿಬ್ಬಂದಿಯಿಂದಲೇ ಹೊರಬಂದಿರುವ ಸಾಧ್ಯತೆ ಕಂಡುಬರುತ್ತಿದೆ ಎಂದರು.
ಡಿಜಿಪಿಯವರ ಸೂಚನೆ ಮೇರೆಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಇದೇ ಹಿನ್ನೆಲೆಯಲ್ಲಿ ಮೊನ್ನೆ ದಿನ ಜೈಲಿನಲ್ಲಿ ತಪಾಸಣೆ ನಡೆಸಲಾಗಿದೆ. ತಪಾಸಣೆಯ ವೇಳೆ 12 ಮೊಬೈಲ್ ಫೋನ್, ಒಂದು ಚಾರ್ಜರ್ ಹಾಗೂ ನಾಲ್ಕು ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ಸಿಐಎಸ್‌ಎಫ್ ಸಿಬ್ಬಂದಿಗಳಲ್ಲಿ ಕೆಲವರ ಬೇಜವಾಬ್ದಾರಿ ನಡೆ ಕಂಡುಬರುತ್ತಿದೆ. ಈ ಬಗ್ಗೆ ಆಂತರಿಕ ತನಿಖೆ ನಡೆಸಲಾಗುವುದು ಎಂದು ಹೇಳಿದರು.ಇನ್ನೂ ಉತ್ತರ ವಲಯ ವ್ಯಾಪ್ತಿಯ ವಿವಿಧ ಜೈಲುಗಳಲ್ಲಿ ಒಟ್ಟು 34 ಮೊಬೈಲ್ ಫೋನ್‌ಗಳು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.