ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ 2022-23ನೇ ಸಾಲಿನಲ್ಲಿ ಮುಂದಿನ 40 ವರ್ಷಗಳ ಅವದಿಗೆ ರೂಪಿಸಿದ್ದ ನಗರಾಭಿವೃದ್ಧಿ ಯೋಜನೆಯನ್ನು ಈಗಿನ ಪ್ರಾಧಿಕಾರದ ಆಡಳಿತ ವಿನಾಕಾರಣ ಬದಲಾಯಿಸಿ, ಏನು ಸಾಧಿಸಲು ಹೊರಟಿದೆ ಎಂದು ಬಿಜೆಪಿ ಹಿರಿಯ ಮುಖಂಡ, ವಕೀಲ, ದೂಡಾ ಮಾಜಿ ಅಧ್ಯಕ್ಷ ಎ.ವೈ.ಪ್ರಕಾಶ ತೀವ್ರ ಅಸಮಾದಾನ ಹೊರಹಾಕಿದರು.ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಪ್ರಾಧಿಕಾರಕ್ಕೆ ತಾವು ಅಧ್ಯಕ್ಷರಿದ್ದ ವೇಳೆ ಸಿಡಿಪಿ ಯೋಜನೆ ರೂಪಿಸಿ, ಸರ್ಕಾರದಿಂದ ಅನುಮೋದನೆ ಪಡೆಯಲಾಗಿತ್ತು. ಇದೀಗ ಪ್ರಾಧಿಕಾರದ ನೂತನ ಆಡಳಿತವು ಹೊಸ ಸಿಡಿಪಿ ಯೋಜನೆ ತಯಾರಿಸಿ, ಆಕ್ಷೇಪಣೆ ಆಹ್ವಾನಿಸಿದ್ದು, ವಸತಿ ಯೋಜನೆಗೆ ಮೀಸಲಿಟ್ಟಿದ್ದ ಜಮೀನನ್ನು ಕೈಗಾರಿಕೆಗಳಿಗೆ ನೀಡಲು ಹೊರಟಿದೆ ಎಂದು ದೂರಿದರು.
ಮುಖ್ಯರಸ್ತೆಗೆ ಸಂಪರ್ಕಿಸುವ ರಸ್ತೆಗಳ ಅಳತೆಯನ್ನೇ ಕಡಿತಗೊಳಿಸಿದೆ. ಈಗಿನ ದೂಡಾ ಆಡಳಿತಕ್ಕೆ ದೂರದೃಷ್ಟಿಯೇ ಇಲ್ಲದಂತಾಗಿದೆ. ತಮ್ಮ ಅವಧಿಯಲ್ಲಿ ಅನುಮೋದಿತ ಮಹಾ ಯೋಜನೆಯ ನಕ್ಷೆ ಪ್ರಕಾರ ಯಾವ ಉದ್ದೇಶಕ್ಕೆ ಜಮೀನಿದ್ದವು, ಅವುಗಳನ್ನು 2 ವರ್ಷದೊಳಗೆ ಯಾವುದೇ ಬದಲಾವಣೆಯಾಗದಂತೆ, 2 ವರ್ಷದ ನಂತರ ಸರ್ಕಾರದ ಅನುಮೋದನೆಯೊಂದಿಗೆ ಉದ್ದೇಶ ಬದಲಾವಣೆಗೆ ಅರ್ಜಿ ಸಲ್ಲಿಸಿ ಅನುಮೋದನೆಗೊಂಡರೆ ಮಾತ್ರ ಬದಲಾದ ಉದ್ದೇಶಕ್ಕೆ ಬಳಸುವ ಷರತ್ತು ವಿಧಿಸಲಾಗಿತ್ತು ಎಂದು ತಿಳಿಸಿದರು.ಅನುಮೋದಿತ ಮಹಾಯೋಜನೆ ನಕ್ಷೆಯು 20 ವರ್ಷದ ದೂರದೃಷ್ಟಿಯಿಂದ ಅನುಮೋದಿಸಲಾಗಿತ್ತು. ಈಗಾಗಲೇ ವಸತಿ ಪ್ರದೇಶದ ಪಕ್ಕದ ಜಮೀನುಗಳ ಮಾಲೀಕರು ಉದ್ದೇಶಿತ ವಸತಿ ಯೋಜನೆ ಜಮೀನನ್ನು ಕೈಗಾರಿಕಾ ಉದ್ದೇಶಕ್ಕೆ ಬದಲಾಯಿಸದಂತೆ ಪ್ರಾಧಿಕಾರಕ್ಕೆ ತಕರಾರು ಮನವಿ ಸಲ್ಲಿಸಿರುತ್ತಾರೆ ಎಂದರು.
ಪಾಲಿಕೆ ಮಾಜಿ ಸದಸ್ಯ, ಬಿಜೆಪಿ ಹಿರಿಯ ಮುಖಂಡ ಶಿವನಹಳ್ಳಿ ರಮೇಶ ಮಾತನಾಡಿ, ದಾವಣಗೆರೆ ನಗರದ ಮಧ್ಯಭಾಗದಲ್ಲಿ ರೈಲ್ವೇ ಹಳಿ ಹಾದುಹೋಗಿದ್ದು, ತೋಳಹುಣಸೆ ನಿಲ್ದಾಣದಿಂದ ಹರಿಹರ ನಿಲ್ದಾಣದವರೆಗೆ ಹಳಿಯ ಎರಡೂ ಭಾಗದಲ್ಲಿ 60 ಅಡಿ ಅಗಲದ ರಸ್ತೆ ಕಾಯ್ದಿರಿಸಬೇಕು. ಕೃಷಿ ಜಮೀನಿನ ಅಂತಿಮ ವಿನ್ಯಾಸಕ್ಕೆ ಮಂಜೂರಾತಿ ಪಡೆಯುವಾಗ ರೈಲ್ವೆ ಹಳಿಯ ಎರಡೂ ಬದಿ ರಸ್ತೆಯಾದರೆ ಒಳಚರಂಡಿ, ಕಾಲುವೆ ನಿರ್ಮಿಸಿ, ರೈಲ್ವೆ ಅಂಡರ್ ಪಾಸ್ ಮುಖಾಂತರ ಮಳೆ ನೀರು, ಒಳಚರಂಡಿ ನೀರು ಮುಂದೆ ಹರಿಯಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದರು.ಮಾಜಿ ಮೇಯರ್‌ಗಳಾದ ಕೆ.ಆರ್.ವಸಂತಕುಮಾರ, ಎಸ್.ಟಿ.ವೀರೇಶ, ಹಿರಿಯ ಮುಖಂಡರಾದ ಕೊಂಡಜ್ಜಿ ಜಯಪ್ರಕಾಶ, ಪಾಲಿಕೆ ಮಾಜಿ ಸದಸ್ಯರಾದ ಎಚ್.ಎನ್.ಶಿವಕುಮಾರ, ಆರ್.ಶಿವಾನಂದ, ಕುಮಾರ, ಸುರೇಶ ಗಂಡುಗಾಳೆ, ಶಿವರಾಜ ಪಾಟೀಲ ಇತರರು ಇದ್ದರು.
ಹೊಸ ಲೇಔಟ್ ನಿರ್ಮಿಸಲು ದೂಡಾ ಮುಂದಾಗಲಿದಾವಣಗೆರೆಯಲ್ಲಿ ಟಿ.ದಾಸಕರಿಯಪ್ಪ ದೂಡಾ ಅಧ್ಯಕ್ಷರಾಗಿದ್ದ 1995-96ರಲ್ಲಿ ಜೆ.ಎಚ್.ಪಟೇಲ್ ಬಡಾವಣೆ ನಿರ್ಮಾಣವಾಗಿದ್ದು, ಆದರೆ ಈಗಿನ ನಿಯಮಾನುಸಾರ ಖಾಸಗಿ ಡೆವಲಪರ್‌ಗಳು ಅನುಮೋದನೆ ಪಡೆದ ಬಡಾವಣೆಗಳು ಸಾರ್ವಜನಿಕರಿಗಾಗಲೀ, ಮುಂದಿನ ಪೀಳಿಗೆಗಾಗಲೀ ಅನುಕೂಲರವಾಗಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ, ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ ದೂರಿದರು.
ಬಡಾವಣೆ ನಿರ್ಮಾಣಕ್ಕೆ ರೈತರಿಂದ ಜಮೀನು ಖರೀದಿಸಲು ದೂಡಾ ಬಳಿ 150 ಕೋಟಿ ರು. ಹಣ ಲಭ್ಯವಿದೆ. ಜೊತೆಗೆ ನಿರ್ಮಿಸುವ ಬಡಾವಣೆಯ ಸಿಎ ಸೈಟ್, ವಾಣಿಜ್ಯ ನಿವೇಶನ, ಸರ್ಕಾರದ ನಿಯಮಾನುಸಾರ ಕಾರ್ನರ್ ಸೈಟ್‌ಗಳನ್ನು ಬಹಿರಂಗ ಹರಾಜು ಹಾಕುವ ಮೂಲಕ ಹಣಕಾಸಿನ ಕೊರತೆಯನ್ನು ನೀಗಿಸಿಕೊಳ್ಳಬಹುದು ಎಂದರು.;Resize=(128,128))
;Resize=(128,128))