ವಸೂಲಿ ದಂಧೆಯಲ್ಲಿ ತೊಡಗಿರುವ ಸಿಡಿಪಿಒ

| Published : Jul 02 2024, 01:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಹುಕ್ಕೇರಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ವಸೂಲಿ ದಂಧೆಯಲ್ಲಿ ತೊಡಗಿದ್ದಾನೆಂದು ಗಂಭೀರ ಆರೋಪ ಮಾಡಿ ಸಿಡಿಪಿಒ ಕಾರ್ಯವೈಖರಿಗೆ ಶಾಸಕ ನಿಖಿಲ್ ಕತ್ತಿ ತೀವ್ರ ಬೇಸರ ವ್ಯಕ್ತಪಡಿಸಿದರು. ಇಲ್ಲಿನ ತಾಲೂಕು ಪಂಚಾಯತಿ ಸಭಾಭವನದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ವಸೂಲಿ ದಂಧೆಯಲ್ಲಿ ತೊಡಗಿದ್ದಾನೆಂದು ಗಂಭೀರ ಆರೋಪ ಮಾಡಿ ಸಿಡಿಪಿಒ ಕಾರ್ಯವೈಖರಿಗೆ ಶಾಸಕ ನಿಖಿಲ್ ಕತ್ತಿ ತೀವ್ರ ಬೇಸರ ವ್ಯಕ್ತಪಡಿಸಿದರು. ಇಲ್ಲಿನ ತಾಲೂಕು ಪಂಚಾಯತಿ ಸಭಾಭವನದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಇಲಾಖೆ ಕಾರ್ಯಕ್ರಮ, ಯೋಜನೆಗಳ ಕುರಿತು ಯಾವುದೇ ರೀತಿಯ ಮಾಹಿತಿಯನ್ನು ಸಿಡಿಪಿಒ ಎಚ್.ಹೊಳೆಪ್ಪ ಅವರು ನನ್ನ ಗಮನಕ್ಕೆ ತರುತ್ತಿಲ್ಲ. ಸೌಜನ್ಯ ಮತ್ತು ಶಿಷ್ಟಾಚಾರಕ್ಕಾದರೂ ನನಗೆ ಭೇಟಿಯಾಗಿಲ್ಲ. ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಂಡು ಸರ್ಕಾರಿ ಸೇವೆಗೆ ನಿಷ್ಕಾಳಜಿ ತೋರುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರಿಂದ ಹಣ ವಸೂಲಿ ಮಾಡುವ ದಂಧೆಯಲ್ಲಿ ತೊಡಗಿ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗುತ್ತಿದ್ದಾರೆ ಎಂದು ಹರಿಹಾಯ್ದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಜೆಜೆಎಂ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಯನ್ನು ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ಕಳಪೆ ಕಾಮಗಾರಿ ಕಂಡು ಬಂದಲ್ಲಿ ಅಂಥ ಗುತ್ತಿಗೆದಾರರ ವಿರುದ್ಧ ನಿರ್ಧಾಕ್ಷೀಣ್ಯ ಕ್ರಮ ಕೈಕೊಳ್ಳಲಾಗುವುದು. ಡೆಂಘೀ ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮುನ್ನಚ್ಚರಿಕೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ರೈತರಿಗೆ ಬಿತ್ತನೆಗೆ ಬೇಕಾದ ಅಗತ್ಯ ಬೀಜ ಮತ್ತು ರಸಗೊಬ್ಬರ ಪೂರೈಸಬೇಕು. ಶಿಥಿಲ ಅಂಗನವಾಡಿ, ಶಾಲಾ ಕಟ್ಟಡಗಳ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಬೇಕು. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಬೇಕು. ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ರೀತಿಯ ಮುಂಜಾಗೃತಾ ಕ್ರಮ ವಹಿಸಬೇಕು. ನೆರೆ ಹಾವಳಿಗೆ ತುತ್ತಾಗುವ ಪ್ರದೇಶಗಳನ್ನು ಗುರುತಿಸಿ ಜನ-ಜಾನುವಾರು ಸ್ಥಳಾಂತರಕ್ಕೆ ಕ್ರಮ ವಹಿಸಬೇಕು. ಗೋಶಾಲೆ ತೆರೆದು ಜಾನುವಾರುಗಳನ್ನು ರಕ್ಷಿಸಬೇಕು ಎಂದು ಆದೇಶಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರೂ ಆದ ತಾಪಂ ಆಡಳಿತಾಧಿಕಾರಿ ನವೀನ ಶಿಂತ್ರೆ, ತಹಸೀಲ್ದಾರ್‌ ಮಂಜುಳಾ ನಾಯಕ, ಇಒ ಪ್ರವೀಣ ಕಟ್ಟಿ, ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ, ಸಹಾಯಕ ನಿರ್ದೇಶಕರಾದ ಪಿ.ಲಕ್ಷ್ಮೀನಾರಾಯಣ, ರಾಜು ಢಾಂಗೆ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಸಾರಾಪುರಿ ಮತ್ತಿತರರು ಉಪಸ್ಥಿತರಿದ್ದರು.

ಯೋಜನಾಧಿಕಾರಿ ಪ್ರಶಾಂತ ಮುನ್ನೋಳಿ ನಿರೂಪಿಸಿ, ವಂದಿಸಿದರು. ಇದೇ ವೇಳೆ ಕಲುಷಿತ ನೀರಿನಿಂದ ಆಗುವ ದುಷ್ಪರಿಣಾಮ ಕುರಿತು ಪ್ರಾತ್ಯಕ್ಷಿಕೆ ನಡೆಸಲಾಯಿತು.ಬಾಕ್ಸ್......

ತುಟಿ ಬಿಚ್ಚದ ಆಡಳಿತಾಧಿಕಾರಿಕೆಡಿಪಿ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳ ಗಂಭೀರ-ಗಹನ ಚರ್ಚೆ, ಪ್ರಶ್ನೋತ್ತರ ನಡೆಯುತ್ತಿದ್ದರೇ ವೇದಿಕೆಯಲ್ಲಿದ್ದ ತಾಪಂ ಆಡಳಿತಾಧಿಕಾರಿಯೂ ಆದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನವೀನ್ ಶಿಂತ್ರೆ ಮೌನಕ್ಕೆ ಜಾರಿದ್ದರು. ಸಭೆ ಆರಂಭದಿಂದ ಮುಕ್ತಾಯದವರೆಗೂ ಶಿಂತ್ರೆ ಅವರು ಎಲ್ಲಿಯೂ ಕೂಡ ತಮ್ಮ ತುಚಿ ಬಿಚ್ಚದಿರುವುದು ಕಂಡು ಬಂದಿತು.

ಬಾಕ್ಸ್....

ಪ್ರಭಾವಿಗಳ ಮನೆ ಕಾಯುತ್ತಿರುವ ಅಧಿಕಾರಿಗಳುತಾಲೂಕಿನ ತಹಸೀಲ್ದಾರ್‌, ಬಿಇಒ ಸೇರಿದಂತೆ ಕೆಲ ಅಧಿಕಾರಿಗಳು ಪ್ರಭಾವಿಗಳ ಮನೆ ಕಾಯುತ್ತಿದ್ದಾರೆ ಎಂದು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕೆಡಿಪಿ ಜಿಲ್ಲಾ ಸಮಿತಿ ಸದಸ್ಯ ಬಸವರಾಜ ಕೋಳಿ ಅವರು ಅಧಿಕಾರಿಗಳ ಧೋರಣೆಗೆ ಆಕ್ರೋಶ ಹೊರಹಾಕಿದರು. ಬಿಇಒ, ತಹಸೀಲ್ದಾರ್‌ ಸೇರಿದಂತೆ ಕೆಲ ಅಧಿಕಾರಿಗಳು ಪ್ರಭಾವಿ ರಾಜಕಾರಣಿಗಳು, ಶಿಕ್ಷಣ ಸಂಸ್ಥೆಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ತಹಸೀಲ್ದಾರ್‌ ಮಂಜುಳಾ ನಾಯಕ, ಬಿಇಒ ಪ್ರಭಾವತಿ ಪಾಟೀಲ ಅವರು ಈ ಕುರಿತು ದಾಖಲೆಗಳಿದ್ದರೆ ಸಲ್ಲಿಸಬೇಕು. ಅಧಿಕಾರಿಗಳ ಮೇಲೆ ಆಧಾರರಹಿತ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಕೋಳಿ ಅವರಿಗೆ ಮನವಿ ಮಾಡಿದರು.