ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಏ. 14 ರ ಅಂಬೇಡ್ಕರ್ ಹುಟ್ಟುಹಬ್ಬವನ್ನು ಮನೆ-ಮನದ ಹಬ್ಬವಾಗಿ ಸಮುದಾಯದ ಎಲ್ಲರೂ ಹಾಗೂ ನಾಗರೀಕ ಪ್ರಜೆಗಳು ಆಚರಿಸಿ, ನಾಡಿಗೆ ಸೌಹಾರ್ದಯುತ ಸಂದೇಶವನ್ನು ಸಾರಲು ಮುಂದಾಗಬೇಕು ಎಂದು ಅಂಬೇಡ್ಕರ್ ವಿವಿಧೊದ್ದೇಶ ಸೇವಾ ಸಂಸ್ಥೆ ಅಧ್ಯಕ್ಷ ತುಂಬುಲ ರಾಮಣ್ಣ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಬೌದ್ಧ ಧರ್ಮದ ಗುರುಗಳಾದ ಬೋಧಿರತ್ನ ಭಂತೇಜಿ, ಮಾತೆ ಬಿಕ್ಕುಣಿ ಗೌತಮಿ, ಮುದ್ದರತ್ನ ಭಂತೇಜಿರವರ ಸಾನಿಧ್ಯದಲ್ಲಿ ಹಾಗೂ ಸಮುದಾಯದ ಪ್ರಗತಿಪರರು, ಚಿಂತಕರು, ಹೋರಾಟಗಾರರು, ಕಲಾವಿದರು, ಪತ್ರಕರ್ತರು, ಕಾನೂನು ಸಲಹೆಗಾರರು, ಸಮುದಾಯದ ಸಂಘ ಸಂಸ್ಥೆಯ ಮುಖಂಡರುಗಳು ಮತ್ತು ಸಮುದಾಯದ ವಿದ್ಯಾರ್ಥಿ ಹೋರಾಟಗಾರರ ಸಮ್ಮುಖದಲ್ಲಿ ಇತ್ತೀಚಿಗೆ ನಮ್ಮ ಎಸ್ಸಿ/ಎಸ್ಟಿ ಮೇಲೆ ಆಗುತ್ತಿರುವ ಅನ್ಯಾಯಗಳು ಮತ್ತು ಮುಂದೆ ನಮ್ಮ ಸಮುದಾಯದ ಸರ್ವತೋಮುಖ ಬೆಳವಣಿಗೆ ಹಿತದೃಷ್ಠಿಯಿಂದ ಕೆಲವು ನಿರ್ಣಯಗಳನ್ನು ತೆಗೆದುಕೊಂಡು ಸಮುದಾಯದ ಜನರನ್ನು ಜಾಗೃತಿಗೊಳಿಸಲು ತೀರ್ಮಾನಿಸಲಾಯಿತು ಎಂದರು.
ಅಂಬೇಡ್ಕರ್ ಭವನ ಹಾಗೂ ಬಾಬು ಜಗಜೀವನ್ ರಾಮ್ ಭವನ ಹಾಗೂ ವಾಲ್ಮೀಕಿ ಭವನ ಇನ್ನಿತರ ಸಮುದಾಯದ ಕಟ್ಟಡಗಳು ಮತ್ತು ಕಟ್ಟಡಗಳ ಜಾಗಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಆಸ್ತಿಗಳನ್ನಾಗಿ ಮಂಜೂರು ಮಾಡಿಕೊಡಲು ಘನ ಸರ್ಕಾರ ಕ್ಯಾಬಿನೆಟ್‌ನಲ್ಲಿ ನಿರ್ಣಯಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೊಂದಾಯಿತ ಸಂಘ-ಸಂಸ್ಥೆಗಳಿಗೆ ನೀಡಲು ಆದೇಶಿಸಲು ಸರ್ಕಾರವನ್ನು ಒತ್ತಾಯಿಸಬೇಕು ಎಂದರು.ಸರ್ಕಾರವು ನಿಗದಿಪಡಿಸಿದ ಮತ್ತು ಮುಂದೆ ನಿಗದಿಪಡಿಸುವ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ವೈಯಕ್ತಿಕ ಕುಟುಂಬದ ಮೂಲ ಉದ್ದೇಶಗಳಾದ ಆಸ್ತಿ ಸೃಜಲೀಕರಣ, ಉನ್ನತ ವಿದ್ಯಾಭ್ಯಾಸ ಮತ್ತು ಗುಣಮಟ್ಟದ ಆರೋಗ್ಯ ಹಾಗೂ ಅವರುಗಳ ವೈಯಕ್ತಿಕ ಉದ್ಯೋಗ ಮತ್ತು ಕೈಗಾರಿಕೆ, ಶೈಕ್ಷಣಿಕ ಸಂಸ್ಥೆಗಳು ಮತ್ತು ಅವರುಗಳದೇ ಸಂಘ ಸಂಸ್ಥೆಗಳ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಬೇಕು ಇತರ ಯೋಜನೆಗಳಿಗೆ ಈ ಹಣ ಬಳಕೆ ಬೇಡ ಎಂದರು.
ನಾಡಿನ ಎಲ್ಲಾ ಸಂಘ-ಸಂಸ್ಥೆಯವರು, ಚಿಂತಕರು, ಬುದ್ದಿಜೀವಿಗಳು, ಹೋರಾಟಗಾರರು, ಪತ್ರಕರ್ತರು, ಕಲಾವಿದರು, ಇನ್ನಿತರ ಸಮಾಜದ ಹೋರಾಟಗಾರರು ಎಲ್ಲರೂ ತಮ್ಮದೇ ಬ್ಯಾನರ್‌ಗಳ ಅಡಿಯಲ್ಲಿ ಸರ್ಕಾರವನ್ನು ಒತ್ತಾಯಿಸಬೇಕಾಗಿ ಮನವಿ ಮಾಡಿದರು.ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ, ನಾಗರಾಜು ಮಾತನಾಡಿ, ಕ್ರಿಸ್‌ಮಸ್, ಬುದ್ದ ಪೌರ್ಣಿಮೆ, ಯುಗಾದಿ ರೀತಿ ಏ. 14 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಹುಟ್ಟುಹಬ್ಬವನ್ನು ಆಚರಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಸುಭಾಷ್ ಮಾಡ್ರಹಳ್ಳಿ, ಗೋವಿಂದರಾಜು, ಪ್ರಕಾಶ್ ಅಮಚವಾಡಿ, ಕಾಂತರಾಜ್ ಇದ್ದರು.