ಮಳವಳ್ಳಿ ತಾಲೂಕಿನ ಚಿಕ್ಕಮುಲಗೂಡು ಗ್ರಾಪಂ ವ್ಯಾಪ್ತಿಯ ಭಾಗ್ಯಮ್ಮ ಹಾಗೂ ಅವರ ಸ್ವ ಸಹಾಯ ಸಂಘದ ಮಹಿಳೆಯರು, ಕುಟುಂಬಸ್ಥರ ಸಹಕಾರದೊಂದಿಗೆ ಮಣ್ಣಿನ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ತಯಾರಿಸಿ ಮನೆಮನೆಗೆ ತಲುಪಿಸುವ ವಿಶೇಷ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಗೌರಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಭಕ್ತಿಯಿಂದ ಆಚರಿಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ತಿಳಿಸಿದರು.

ಮಂಡ್ಯ ನಗರದ ಬಂದೀಗೌಡ ಬಡಾವಣೆಯ ಶ್ರೀಕಾಲಭೈರವೇಶ್ವರ ದೇವಾಲಯದ ಆವರಣದಲ್ಲಿ ಶನಿವಾರ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ವತಿಯಿಂದ ಗೌರಿ-ಗಣೇಶ ವ್ರತಾಚರಣೆ ಪ್ರಯುಕ್ತ ಆಯೋಜಿಸಿದ್ದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಉಚಿತ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

ಮಳವಳ್ಳಿ ತಾಲೂಕಿನ ಚಿಕ್ಕಮುಲಗೂಡು ಗ್ರಾಪಂ ವ್ಯಾಪ್ತಿಯ ಭಾಗ್ಯಮ್ಮ ಹಾಗೂ ಅವರ ಸ್ವ ಸಹಾಯ ಸಂಘದ ಮಹಿಳೆಯರು, ಕುಟುಂಬಸ್ಥರ ಸಹಕಾರದೊಂದಿಗೆ ಮಣ್ಣಿನ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ತಯಾರಿಸಿ ಮನೆಮನೆಗೆ ತಲುಪಿಸುವ ವಿಶೇಷ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ಕಾರ್ಯವು ಪರಿಸರ ಸಂರಕ್ಷಣೆ ಜೊತೆಗೆ ಮಹಿಳಾ ಸಬಲೀಕರಣ ಹಾಗೂ ಸ್ವಾವಲಂಬನೆಗೆ ಉತ್ತೇಜನ ನೀಡುವಂತಾಗಿದೆ ಎಂದರು.

ವಿಶೇಷ ಚೇತನತೆಯನ್ನು ಹೊಂದಿರುವ ತಮ್ಮ ಮಗನೊಂದಿಗೆ ಕುಟುಂಬಸ್ಥರು ಆತ್ಮಸ್ಥೈರ್ಯದಿಂದ ಮುನ್ನಡೆಯುತ್ತಿದ್ದು, ಜೀವನದಲ್ಲಿ ಸಾಧನೆ ಮಾಡುವ ಮನೋಭಾವ ಹೊಂದಿದ್ದಾರೆ. ಪರಿಸರ ಸ್ನೇಹಿ ಗಣೇಶ ಮತ್ತು ಗೌರಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಶ್ಲಾಘಿಸಿದರು.

ಸುಮಾರು ಒಂದು ಸಾವಿರ ಮಣ್ಣಿನ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ತಯಾರಿಸಿ ಮನೆ ಮನೆಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಆಶ್ರಯದಲ್ಲಿ ಪರಿಸರ ಸ್ನೇಹಿ ಹಬ್ಬ ಆಚರಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡಲಾಗುತ್ತಿದೆ ಎಂದರು.

ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಬಳಿಕ ವಿಸರ್ಜನೆಯ ಸಂದರ್ಭದಲ್ಲಿ ಹೂವಿನ ಕುಂಡ, ಬಕೆಟ್ ಅಥವಾ ಸೂಕ್ತ ಪಾತ್ರೆಯಲ್ಲಿ ವಿಸರ್ಜಿಸಿ ಅದೇ ಮಣ್ಣಿನಲ್ಲಿ ಗಿಡಗಳನ್ನು ಬೆಳೆಸಬಹುದು. ನವಧಾನ್ಯ, ಬೀಜ ಗಣಪತಿ ಹಾಗೂ ತುಳಸಿಯಂತಹ ಸಸಿಗಳನ್ನು ಬೆಳೆಸುವ ಮೂಲಕ ಮಕ್ಕಳಲ್ಲಿಯೂ ಪರಿಸರ ಕಾಳಜಿ ಹಾಗೂ ಜವಾಬ್ದಾರಿಯುತ ನಾಗರಿಕತೆಯ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದರು.

ನಾವು ಪರಿಸರ ಸ್ನೇಹಿ ಹಬ್ಬ ಆಚರಿಸಿದರೆ ಇದನ್ನು ನೋಡಿದ ಮಕ್ಕಳು ಕೂಡ ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆ ಮಹತ್ವವನ್ನು ಅರಿತು ಉಳಿಸಲು, ಧಾರ್ಮಿಕ ಆಚರಣೆಗಳನ್ನು ಭಕ್ತಿಯಿಂದ, ಭಾವೈಕ್ಯತೆ, ಪರಿಸರ ಕಾಳಜಿಯಿಂದ ಆಚರಿಸಲು ನೆರವಾಗುತ್ತದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಟ್ರಸ್ಟ್ ಕಾರ್ಯದರ್ಶಿ ಪುರುಷೋತ್ತಮನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ಟ್ರಸ್ಟ್ ಅಧ್ಯಕ್ಷ ವಿನಯ್ ಕುಮಾರ್ ನೇತೃತ್ವ ವಹಿಸಿದ್ದರು. ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಟ್ರಸ್ಟ್‌ನ ಹಿತೈಷಿಗಳು ಉಪಸ್ಥಿತರಿದ್ದರು.