ಸೌಹಾರ್ದತೆಯಿಂದ ಬಕ್ರೀದ್‌ ಹಬ್ಬ ಆಚರಿಸಿ

| Published : Jun 17 2024, 01:33 AM IST

ಸಾರಾಂಶ

ಬಕ್ರೀದ್ ಹಬ್ಬವನ್ನು ಎಲ್ಲರೂ ಅತ್ಯಂತ ಶಾಂತಿಯುತವಾಗಿ ಸಾಮರಸ್ಯದಿಂದ ಆಚರಿಸಬೇಕು ಎಂದು ಪಿಎಸೈ ಸಂಜಯ ತಪ್ಪಾರೆಡ್ಡಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಬಕ್ರೀದ್‌ ಹಬ್ಬವನ್ನು ಎಲ್ಲರೂ ಅತ್ಯಂತ ಶಾಂತಿಯುತವಾಗಿ ಸಾಮರಸ್ಯದಿಂದ ಆಚರಿಸಬೇಕು ಎಂದು ಪಿಎಸೈ ಸಂಜಯ ತಪ್ಪಾರೆಡ್ಡಿ ತಿಳಿಸಿದರು.

ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಭಾನುವಾರ ಮುಸ್ಲಿಂ ಧಾರ್ಮಿಕ ಮುಖಂಡರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡ ನೇತೃತ್ವದಲ್ಲಿ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಹಲವಾರು ವರ್ಷಗಳಿಂದ ಮುದ್ದೇಬಿಹಾಳ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹಿಂದೂ-ಮುಸ್ಲಿಂ ಎನ್ನುವ ಯಾವುದೇ ಬೇದಭಾವವಿಲ್ಲದೇ ಪರಸ್ಪರ ಎಲ್ಲ ಹಬ್ಬ ಹರಿದಿನಗಳಲ್ಲಿ ಭಾಗಿಯಾಗಿ ಸೌಹಾರ್ದತೆಯಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಇದರಿಂದ ಇಲ್ಲಿ ಸದಾ ಧಾರ್ಮಿಕ ಸೌಹಾರ್ದತೆಯ ಪ್ರತೀಕವಾಗಿ ಉಳಿದಿದೆ. ಜೂನ್ ೧೭ ರಂದು ಬಕ್ರೀದ್ ಹಬ್ಬವನ್ನು ಯಾವುದೇ ಗೊಂದಲಗಳಿಲ್ಲದೇ ಆಚರಿಸುವಂತೆ ಸಮಾಜದ ಮುಖಂಡರಲ್ಲಿ ಮನವಿ ಮಾಡಿದರು. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ರುವ ಜಾತಿ ಧರ್ಮ, ಸಂಸ್ಕೃತಿ ಸೇರಿದಂತೆ ಇತರೇ ರೀತಿಯ ಕೋಮಭಾವನೆ ಕೆರಳಿಸುವ ಪೋಸ್ಟ್‌ಗಳ ಸುದ್ದಿಗಳ ಬಗ್ಗೆ ಜಾಗರೂಕರಾಗಿರಬೇಕು. ಯಾವುದೇ ಸಣ್ಣ ಸಮಸ್ಯೆ ಸಂಭವಿಸಿದರೂ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಮೂಲಕ ಮುಂದಾಗುವ ಅಹಿತಕರ ಘಟನೆ ತಪ್ಪಿಸಿ ಶಾಂತಿಯುವತ ವಾತಾವರಣ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಇತ್ತೀಚಿಗೆ ಪಟ್ಟಣದಲ್ಲಿ ದಿನದಿನಕ್ಕೆ ಸಾರ್ವಜನಿಕರ ಸಂಚಾರದಿಂದ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಹಾಗೂ ಇತರೇ ವಾಹನಗಳ ಸವಾರರು ವೇಗವಾಗಿ ವಾಹನಗಳನ್ನು ಓಡಿಸುವುದು ಮಾತ್ರವಲ್ಲದೇ ವಾಹನ ಪರವಾನಿಗೆ, ಲೈಸನ್ಸ್, ಇನ್ಸುರೆನ್ಸ್ ಇಲ್ಲದೇ, ವೇಗವಾಗಿ ವಾಹನ ಓಡಿಸುವುದು ಕಾನೂನು ಉಲ್ಲಂಘಿಸಿದಂತಾಗುತ್ತದೆ. ಇದರಿಂದಾಗಿ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಕಾರಣ ಜಾಗೃತಿಯಿಂದ ವಾಹನಗಳನ್ನು ಓಡಿಸಬೇಕು. ಇದರಿಂದ ಅಪಘಾತಗಳನ್ನು ತಡೆಯಲು ಸಾಧ್ಯ ಎಂದರು.

ಈ ವೇಳೆ ಯುವ ಮುಖಂಡ ಕಾಮರಾಜ ಬಿರಾದಾರ ಅವರು ಮಾತನಾಡಿ. ನಮ್ಮಲ್ಲಿ ಯಾವುದೇ ತರಹದ ಗೊಂದಲಗಳಿಲ್ಲ. ಎಲ್ಲ ಧರ್ಮದವರು ಅವರವರ ಧರ್ಮ ಆಚರಣೆಗಳನ್ನು ಸೌಹಾರ್ದತೆಯಿಂದ ಆಚರಿಸುವುದರೊಂದಿಗೆ ಭಾವೈಕೆತೆ ಮೆರೆಯುತ್ತಿದ್ದೇವೆ. ಈಗಲೂ ಸಹಿತ ನಾವೇಲ್ಲ ಒಗ್ಗಟ್ಟಾಗಿ ಬಕ್ರೀದ್‌ ಹಬ್ಬವನ್ನು ಆಚರಿಸುತ್ತೇವೆ. ಯಾವುದೇ ಅನುಮಾನ ಬೇಡ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮೈಬೂಬ ಗೊಳಸಂಗಿ, ಉದ್ಯಮಿ ಸದಾಶಿವ ಮಠ, ಯುವ ಮುಖಂಡರಾದ ಎಚ್. ಬಿ ಸಾಲಿಮನಿ,ಹುಸೇನ್ ಮುಲ್ಲಾ, ರಾಜಶೇಖರ ಹೊಳಿ, ಸಂಗಪ್ಪ ಮೇಲಿನಮನಿ, ಸಂಜು ಬಾಗೇವಾಡಿ, ಸದ್ದಾಂ ಕುಂಟೋಜಿ, ಮುನ್ನಾ ಮಕನದಾರ, ಬಾಪ್ ಢವಳಗಿ ಮಹಾಂತೇಶ ಬೂದಿಹಾಳಮಠ ಸೇರಿದಂತೆ ಹಲವರು ಇದ್ದರು.