ತಾಲೂಕು ಮಟ್ಟದಲ್ಲಿ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಜಯಂತಿಯ ಆಚರಣೆಗೆ ಕ್ರಮ ವಹಿಸಬೇಕು.

ಗದಗ: ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತಿಯನ್ನು ಏ. 20ರಂದು ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಅರ್ಥಪೂರ್ಣವಾಗಿ ಹಾಗೂ ವ್ಯವಸ್ಥಿತವಾಗಿ ಆಚರಿಸಲು ಕ್ರಮ ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿ ಕುರಿತು ಜರುಗಿದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕು ಮಟ್ಟದಲ್ಲಿ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಜಯಂತಿಯ ಆಚರಣೆಗೆ ಕ್ರಮ ವಹಿಸಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಹಾಗೂ ಸಮಾಜದ ಹಿರಿಯರಿಗೆ ಸನ್ಮಾನಿಸುವ ಕಾರ್ಯಕ್ರಮ ಜರುಗಲಿದೆ ಎಂದರು. ಬಸವೇಶ್ವರ ಜಯಂತಿಯಂದು ಅವರ ವಿಚಾರಧಾರೆಗಳು ಸರ್ವರಿಗೂ ತಲುಪುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳೊಂದಿಗೆ ಸಮಾಜದ ಹಿರಿಯರು, ಗಣ್ಯರು, ವಿವಿಧ ಸಂಘಟನೆಗಳು ಜಯಂತಿಯ ಯಶಸ್ವಿಗೆ ಕೈಜೋಡಿಸಬೇಕೆಂದರು.

ಸಭೆಯಲ್ಲಿ ವೇದಿಕೆ ವ್ಯವಸ್ಥೆ, ಅಲ್ಪೋಪಹಾರದ ವ್ಯವಸ್ಥೆ, ಕಲಾ ತಂಡಗಳ ಆಯ್ಕೆ ಪ್ರಬಂಧ ಸ್ಪರ್ಧೆ ಆಯೋಜನೆ, ಸ್ತಬ್ದ ಚಿತ್ರ ಮೆರವಣಿಗೆ ಕುರಿತು ಚರ್ಚಿಸಲಾಯಿತು. ಜಯಂತಿ ಕಾರ್ಯಕ್ರಮಕ್ಕೂ ಮುನ್ನ ಮೆರವಣಿಗೆಯ ಆಯೋಜನೆ ಕುರಿತು ವಿವಿಧ ಮುಖಂಡರು ತಮ್ಮ ತಮ್ಮ ಸಲಹೆಗಳನ್ನು ಸಭೆಯ ಗಮನಕ್ಕೆ ತಂದರು.ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಸೇರಿದಂತೆ ಸಮಾಜದ ಮುಖ್ಯಸ್ಥರು, ಗಣ್ಯರು, ಹಿರಿಯರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ ಸ್ವಾಗತಿಸಿದರು.