ಸಾರಾಂಶ
ಹುಬ್ಬಳ್ಳಿ:
ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ-ಸೌಹಾರ್ದತೆಯಿಂದ ಆಚರಿಸಲು ಇಲ್ಲಿನ ಸವಾಯಿ ಗಂಧರ್ವ ಹಾಲ್‌ನಲ್ಲಿ ನಡೆದ ಸರ್ವಧರ್ಮ ಶಾಂತಿ ಸಭೆಯಲ್ಲಿ ನಿರ್ಧರಿಸಲಾಯಿತು. ಎಲ್ಲ ಧರ್ಮಗಳ ಗುರುಗಳ ಭಾಗವಹಿಸಿ ಎರಡು ಹಬ್ಬಗಳನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಕರೆ ನೀಡಿದರು.ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಮಾತನಾಡಿ, ಅಹಿತಕರ ಘಟನೆಗಳಿಗೆ ಅವಕಾಶ ಕೊಡದೇ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕು. ಯಾರೋ ಕಿಡಿಗೇಡಿಗಳು ಮಾಡುವ ಸಮಸ್ಯೆಗೆ ಧರ್ಮದ ಬಣ್ಣ ಕೊಡದೇ, ಅಂಥವರ ಬಗ್ಗೆ ಮಾಹಿತಿ ನೀಡಿದರೆ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಹು-ಧಾ ಮಹಾನಗರ ವ್ಯಾಪ್ತಿಯ 6 ಕಡೆ ಗಣೇಶ ವಿಸರ್ಜನಾ ಸ್ಥಳ ಗುರುತಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿಸರ್ಜನಾ ಬಾವಿ ಮತ್ತು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಗತ್ಯ ಸೌಲಭ್ಯವನ್ನು ಪಾಲಿಕೆಯಿಂದ ಕಲ್ಪಿಸಲಾಗುತ್ತಿದೆ. ಈಗಾಗಲೇ ಸಾರ್ವಜನಿಕರ ಅನುಕೂಲಕ್ಕಾಗಿ 9 ಮೊಬೈಲ್ ಬಾವಿ ಸಿದ್ಧಗೊಳಿಸಲಾಗಿದ್ದು, ಸಾರ್ವಜನಿಕರ ಅಪೇಕ್ಷೆ ಮೇರೆಗೆ ಹೆಚ್ಚಿಸಲು ಕ್ರಮವಹಿಸಲಾಗುವುದು ಎಂದರು.ಪೊಲೀಸ್ ಇಲಾಖೆ ಮಾರ್ಗದರ್ಶನದಂತೆ ಸೂಕ್ಷ್ಮ, ಅತೀಸೂಕ್ಷ್ಮ ಪ್ರದೇಶದಲ್ಲಿ ಸಿಸಿಟಿವಿ, ಡ್ರೋನ್ ಕ್ಯಾಮೆರಾ ಬಳಸಲು ಆದ್ಯತೆ ನೀಡಲಾಗುತ್ತಿದೆ. ಏಕಗವಾಕ್ಷಿಯಲ್ಲಿ ಅರ್ಜಿ ಪಡೆದು ಪರವಾನಗಿ ನೀಡುವ ಪ್ರಕ್ರಿಯೆಯೂ ನಡೆದಿದ್ದು, ಈಗಾಗಲೇ 10 ಪರವಾನಗಿ ನೀಡಲಾಗಿದೆ. ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಗುಟಕಾ, ತಂಬಾಕು ಸೇರಿ ಯಾವುದೇ ಜಾಹೀರಾತು ಫಲಕ ಅಳವಡಿಸದಂತೆ ಸೂಚಿಸಲಾಗಿದೆ ಎಂದರು.
ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಕೂಡಿ ಇದ್ದು, ಬದುಕಿ ಬಾಳಿದರೆ ಭಾವೈಕ್ಯದ ಬೇರು ಭದ್ರವಾಗಿರುತ್ತದೆ. ನಗರಕ್ಕೆ ದಕ್ಷ ಅಧಿಕಾರಿಗಳ ಸೇವೆ ಅಗತ್ಯವಾಗಿದೆ. ಸಾರ್ವಜನಿಕರು ಸಹ ತಮ್ಮ ಜವಾಬ್ದಾರಿ ಅರಿತು ಬದುಕಬೇಕು ಎಂದು ಮನವಿ ಮಾಡಿದರು.ಸಭೆಯಲ್ಲಿ ಮುಸ್ಲಿಂ ಧರ್ಮ ಗುರು ತಾಜುದ್ದೀನ್‌ಪೀರ್ ಖಾದ್ರಿ, ಕಿಶ್ಚಿಯನ್ ಧರ್ಮಗುರು ಆಲ್ವಿನ್ ಸುಧೀರ್, ಸಿಖ್ ಧರ್ಮಗುರು ಗ್ಯಾನಿ ಸುರೇಂದ್ರಸಿಂಗ್, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಶಾಸಕ ಅಶೋಕ ಕಾಟವೆ, ಗುರುನಾಥ ಉಳ್ಳಿಕಾಶಿ, ಶಾಂತರಾಜ ಪೋಳ, ಅಲ್ತಾಫ್ ಕಿತ್ತೂರ, ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್., ಎಸಿಪಿ ಶಿವಪ್ರಕಾಶ ನಾಯ್ಕ ಸೇರಿದಂತೆ ಇತರರು ಇದ್ದರು.ರಾತ್ರಿ 10ಕ್ಕೆ ಡಿಜೆ ಬಂದ್ ಮಾಡಿ
ಸಭೆಯಲ್ಲಿ ಸಾರ್ವಜನಿಕರು ಗಣೇಶೋತ್ಸವ ಮೆರವಣಿಗೆಗೆ 12.30ರ ವರೆಗೆ ಡಿಜೆಗೆ ಅವಕಾಶ ಕೊಡುವ ಬಗ್ಗೆ ಮತ್ತು ರಸ್ತೆಯಲ್ಲಿನ ತಗ್ಗು-ಗುಂಡಿ ಮುಚ್ಚಲು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್, ಸುಪ್ರೀಂಕೋರ್ಟ್ ಗೈಡ್‌ಲೈನ್ಸ್ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿ ರಾತ್ರಿ 10ಕ್ಕೆ ಡಿಜೆ ಬಂದ್ ಮಾಡಬೇಕು. ರಸ್ತೆ ತಗ್ಗು-ಗುಂಡಿ, ವಿದ್ಯುತ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಅಗತ್ಯ ಕ್ರಮವಹಿಸಿದ್ದಾರೆ ಎಂದು ತಿಳಿಸಿದರು.ಎರಡೂ ಹಬ್ಬಗಳ ಶಾಂತಿಯುತ ಆಚರಣೆಗೆ ಅಗತ್ಯ ಭದ್ರತಾ ಕಾರ್ಯ ಮಾಡಲಾಗುತ್ತಿದೆ. ಕಮಿಷನರೇಟ್‌ನ ಅಧಿಕಾರಿಗಳು, ಸಿಬ್ಬಂದಿ ಜತೆಗೆ ಹೆಚ್ಚುವರಿಯಾಗಿ ಹೊರಜಿಲ್ಲೆಯಿಂದ ಸಿಬ್ಬಂದಿ-ಅಧಿಕಾರಿಗಳು ಬಂದೋಬಸ್ತ್‌ಗೆ ಬರುತ್ತಿದ್ದಾರೆ. ಅದರೊಟ್ಟಿಗೆ ಸಿಎಆರ್, ಆರ್‌ಎಎಫ್, ಸಿವಿಲ್ ಮತ್ತು ಸಶಸ್ತ್ರ ಮೀಸಲು ಪಡೆಯೂ ಕಾರ್ಯನಿರ್ವಹಿಸಲಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.