ಜಿಲ್ಲೆಯಾದ್ಯಂತ ಆಚರಿಸಲ್ಪಡುವ ಗಣೇಶೋತ್ಸವವನ್ನು ಸೌಹಾರ್ದತೆಯಿಂದ ಆಚರಿಸಬೇಕು, ಎಲ್ಲಿಯೂ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು ಕೋರಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲೆಯಾದ್ಯಂತ ಆಚರಿಸಲ್ಪಡುವ ಗಣೇಶೋತ್ಸವವನ್ನು ಸೌಹಾರ್ದತೆಯಿಂದ ಆಚರಿಸಬೇಕು, ಎಲ್ಲಿಯೂ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು ಕೋರಿದರು.ಸ್ಥಳೀಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬವದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡುವುದು ಕೇವಲ ಪೊಲೀಸ್ ಇಲಾಖೆಯಷ್ಟೇ ಎಲ್ಲ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಈ ಹಿನ್ನೆಲೆಯಲ್ಲಿ ಎಲ್ಲ ಸಮುದಾಯದವರು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡ ಬಾರದು, ಪರಸ್ಪರ ಸ್ನೇಹ,ಸಹಕಾರ, ಸೌಹಾರ್ದತೆಯಡಿ ಶಾಂತಿಯುತವಾಗಿ ಪರಿಸರ ಸ್ನೇಹಿ ಗಣೇಶೋತ್ಸವವನ್ನು ಆಚರಿಸಬೇಕು ಎಂದರು.
ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಹಾಗೂ ಪರಿಶೀಲಿಸದ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ತಿಳಿಸಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹರೀಶ ಮಾತನಾಡಿದರು. ಸಭೆಯಲ್ಲಿ ಡಿಎಸ್ಪಿ ಶಾಂತವೀರ, ವಿವಿಧ ಸಮಾಜದ ಹಿರಿಯ-ಕಿರಿಯ ಮುಖಂಡರು, ಗಜಾನನ ಮಂಡಳಿಯ ಸದಸ್ಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.ರಾಸಾಯನಿಕ ಬಣ್ಣಲೇಪಿತ ಗಣಪನ ವಿಗ್ರಹಗಳ ತಯಾರಿಕೆ ನಿಷಿದ್ಧ: ಡಿಸಿ: ಸರ್ಕಾರದ ಆದೇಶದನ್ವಯ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮತ್ತು ರಾಸಾಯನಿಕ ಬಣ್ಣ ಲೇಪಿತ ಗಣಪತಿ ವಿಗ್ರಹಗಳ ತಯಾರಿಕೆ, ಸಂಗ್ರಹ, ಮಾರಾಟ ನಿಷೇಧಿಸಲಾಗಿದ್ದು, ಮಣ್ಣು ಅಥವಾ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾತ್ರ ಪ್ರತಿಷ್ಠಾಪಿಸಬೇಕು ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ.
ಜಿಲ್ಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಆಚರಿಸಲಾಗುತ್ತಿರುವ ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಗಣೇಶ ವಿಗ್ರಹಗಳ ತಯಾರು, ಸಂಗ್ರಹ, ಮಾರಾಟ ಮತ್ತು ವಿಸರ್ಜನೆಯಿಂದ ಪರಿಸರಕ್ಕೆ ಹಾನಿಯಾಗುವಂತಹ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ವಸ್ತುಗಳು ಮತ್ತು ಲೋಹ ಮಿಶ್ರಿತ (ಆಯಿಲ್ ಪೆಂಟ್) ಬಣ್ಣಗಳನ್ನು ಉಪಯೋಗಿಸುವುದರಿಂದ, ನೈಸರ್ಗಿಕ ಜಲಮೂಲಗಳು ಕಲುಷಿತಗೊಂಡು ಇವುಗಳ ಭೌತಿಕ ಹಾಗೂ ರಾಸಾಯನಿಕ ಗುಣಗಳು ಮಾರ್ಪಟ್ಟು ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದಲ್ಲದೇ ಪ್ರಾಣಿ, ಪಕ್ಷಿ ಹಾಗೂ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ. ಅಲ್ಲದೇ ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಗಣೇಶನ ಮೂರ್ತಿಗಳ ವಿಸರ್ಜನೆಯಿಂದ ಕೆರೆ, ಬಾವಿ, ಕೊಳ, ನದಿಗಳಲ್ಲಿನ ನೀರು ಮಾಲಿನ್ಯವಾಗದಂತೆ ಮೇಲ್ವಿಚಾರಣೆ ವಹಿಸುವುದು ಅವಶ್ಯಕ ಹಾಗೂ ಇದಕ್ಕಾಗಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಜಿಲ್ಲೆಯ ನಗರ ಹಾಗೂ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ವ್ಯಾಪ್ತಿ ಯಲ್ಲಿಯೂ ಈ ಬಾರಿಯ ಗೌರಿ-ಗಣೇಶ ಹಬ್ಬದ ಸಮಯದಲ್ಲಿ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆ ಕುರಿತು ಕೆಳಗಿನಂತೆ ಪಾಲನೆ ಮಾಡಲು ಸಾರ್ವಜನಿಕರಿಗೆ ತಿಳಿಸಿರುತ್ತಾರೆ.ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ (ಪಿ.ಓ.ಪಿ)/ ಲೋಹ ಮಿಶ್ರಿತ ಬಣ್ಣ ಲೇಪಿತದಂತಹ ಮೂರ್ತಿಗಳನ್ನು ಬಳಸದೇ ನೈಸರ್ಗಿಕ ಬಣ್ಣಗಳಿಂದ ತಯಾರಿ ಸಿರುವ ಮಣ್ಣಿನ ಚಿಕ್ಕ ಮೂರ್ತಿಗಳನ್ನು ಖರೀದಿಸಿ ಪೂಜಿಸುವಂತೆ ತಿಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ಸ್ಥಾಪನೆಗೆ ಸಂಬಂಧಪಟ್ಟಂತೆ, ಗಣೇಶ ಮಂಡಳಿಯವರು ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯಿಂದ ಅಗತ್ಯ ಪರವಾನಿಗೆ ಪಡೆಯುವ ಮೂಲಕ ಷರತ್ತು ಮತ್ತು ನಿಬಂಧನೆಗಳನ್ನು ಪಾಲನೆ ಮಾಡಲು ತಿಳಿಸಲಾಗಿದೆ. ಹಬ್ಬದ ಸಂದರ್ಭದಲ್ಲಿ ಪ್ಲಾಸ್ಟಿಕ್ ರಹಿತ ವಸ್ತುಗಳ ಬದಲಿಗೆ ಹೂವು ಪತ್ರೆಗಳಿಂದ ಅಲಂಕರಿಸಿ ಮಣ್ಣಿನ ಗಣೇಶ ಮೂರ್ತಿಯನ್ನು ಪೂಜಿಸುವುದು.
ಗಣೇಶನ ಮೂರ್ತಿಗಳನ್ನು ಸ್ಥಳೀಯ ಸಂಸ್ಥೆಗಳು (ಮುನ್ಸಿಪಾಲಿಟಿಗಳು) ಗೊತ್ತುಪಡಿಸಿದ ತಾತ್ಕಾಲಿಕ ಟ್ಯಾಂಕ್ / ಕಟ್ಟೆ ಮತ್ತು ಕೊಳಗಳಲ್ಲಿ ಮಾತ್ರ ವಿಸರ್ಜಿಸು ವುದು & ಮೂರ್ತಿಗಳ ವಿಸರ್ಜನೆಯ ಸಮಯದಲ್ಲಿ ಹೂವು ಹಾಗೂ ಇನ್ನಿತರ ಪೂಜಾ ಸಾಮಾಗ್ರಿಗಳನ್ನು ಗೊತ್ತುಪಡಿಸಿದ ತಾತ್ಕಾಲಿಕ ಟ್ಯಾಂಕ್ / ಕಟ್ಟೆ ಮತ್ತು ಕೊಳದ ದಡದಲ್ಲಿ ಇಟ್ಟಿರುವ ಬುಟ್ಟಿಗಳಲ್ಲಿ ಅಥವಾ ನಿಗಧಿತ ಜಾಗದಲ್ಲಿ ಹಾಕಲು ತಿಳಿಸಿದೆ.ಸಾರ್ವಜನಿಕರು ಮನೆಗಳಲ್ಲಿ ಸ್ಥಾಪಿಸಲ್ಪಟ್ಟ ಮೂರ್ತಿಗಳ ವಿಸರ್ಜನೆಯ ಸಮಯದಲ್ಲಿ ಒಂದು ಬಕೆಟ್ ನೀರಿನಲ್ಲಿ ವಿಸರ್ಜಿಸುವ ಪದ್ಧತಿಯನ್ನು ರೂಢಿ ಮಾಡಿಕೊಳ್ಳು ವುದು ಮತ್ತು ವಿಸರ್ಜನೆ ಮಾಡಲಾದ ಮಣ್ಣನ್ನು ಮನೆಗಳ ಆವರಣದಲ್ಲಿರುವ ಗಿಡಗಳ ಬದುಗಳಿಗೆ ಹಾಕುವುದು. ಹಬ್ಬದ ಸಮಯದಲ್ಲಿ ಶಬ್ಧ ಮತ್ತು ವಾಯು ಮಾಲಿನ್ಯ ತಡೆಗೆ ಹೆಚ್ಚಿನ ಧ್ವನಿ ಹೊರಸೂಸುವ ಧ್ವನಿವರ್ಧಕ ಮತ್ತು ಪಟಾಕಿಗಳನ್ನು ಉಪಯೋಗಿಸಬೇಡಿ (ರಾತ್ರಿ ಸಮಯ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ/ಪಟಾಕಿಗಳ ಬಳಕೆಯನ್ನು ನಿಷೇಧಿಸಲಾಗಿದೆ).
ಈ ರೀತಿ ಈ ವರ್ಷ ಮಣ್ಣಿನ ಗಣೇಶ ಮೂರ್ತಿಗಳನ್ನು ಪೂಜಿಸುವುದರೊಂದಿಗೆ ರಾಯಚೂರು ಜಿಲ್ಲೆಯ ನೈಸರ್ಗಿಕ ಜಲಮೂಲಗಳು (ಕೆರೆ, ಬಾವಿ, ಕೊಳ, ನದಿ) ಕಲುಷಿತಗೊಳ್ಳದಂತೆ ಹಾಗೂ ಪ್ರಾಣಿ, ಪಕ್ಷಿ ಹಾಗೂ ಜಲಚರಗಳ ಜೀವಕ್ಕೆ ಅಪಾಯವಾಗದಂತೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆಯಾಗದಂತೆ ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸೋಣ ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.