ಹೋಳಿ ಹಬ್ಬವನ್ನು ಸೌಹಾರ್ದಯುತವಾಗಿ ಆಚರಿಸಿ: ಗುರುಸಿದ್ಧ ರಾಜಯೋಗೀಂದ್ರ ಶ್ರೀ

| Published : Mar 24 2024, 01:35 AM IST

ಹೋಳಿ ಹಬ್ಬವನ್ನು ಸೌಹಾರ್ದಯುತವಾಗಿ ಆಚರಿಸಿ: ಗುರುಸಿದ್ಧ ರಾಜಯೋಗೀಂದ್ರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮ ಗುರುಗಳ ಮಾರ್ಗದಲ್ಲಿ ಎಲ್ಲ ಸಮಾಜದವರು ಮುನ್ನಡೆದು ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಎಲ್ಲ ಧರ್ಮೀಯರೂ ಸೌಹಾರ್ದದಿಂದ ಹೋಳಿ ಹಬ್ಬವನ್ನು ಆಚರಣೆ ಮಾಡಿದರೆ ಅದರ ಸಂಭ್ರಮ ಇಮ್ಮಡಿಯಾಗುತ್ತದೆ. ಹಾಗಾಗಿ ಒಂದು ಧರ್ಮೀಯರು ಹಬ್ಬ ಆಚರಿಸುವಾಗ ಅನ್ಯ ಧರ್ಮೀಯರು ಅದಕ್ಕೆ ಸಹಕಾರ ನೀಡಬೇಕು ಎಂದು ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಹು- ಧಾ ಪೊಲೀಸ್‌ ಕಮಿಷನರೇಟ್‌ ವತಿಯಿಂದ ಹೋಳಿ, ರಂಜಾನ್‌, ಗುಡ್‌ ಫ್ರೈಡೇ ಅಂಗವಾಗಿ ಶನಿವಾರ ಕಾರವಾರ ರಸ್ತೆಯ ಹಳೆ ಸಿಎಆರ್‌ ಮೈದಾನದಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಮಾತನಾಡಿದರು.

ಭಾರತದಂತಹ ಬಹು ವೈವಿದ್ಯಮಯ ದೇಶದಲ್ಲಿ ಒಬ್ಬರಿಗೊಬ್ಬರು ಸಹಕಾರ ನೀಡುವುದು ಅಗತ್ಯ. ಹಿಂದಿನಿಂದಲೂ ಅವಳಿನಗರದಲ್ಲಿ ನಾವೆಲ್ಲರೂ ಸೌಹಾರ್ದಯುತವಾಗಿ ಎಲ್ಲ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದೇವೆ. ಧರ್ಮ ಗುರುಗಳ ಮಾರ್ಗದಲ್ಲಿ ಎಲ್ಲ ಸಮಾಜದವರು ಮುನ್ನಡೆದು ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೆ ಸಹಕಾರ ನೀಡಬೇಕು ಎಂದರು.

ಅಂಜುಮನ್‌ ಇಸ್ಲಾಮಿಕ್‌ ಸಂಸ್ಥೆ ಅಧ್ಯಕ್ಷ ಎ.ಎಂ.ಹಿಂಡಸಗೇರಿ ಮಾತನಾಡಿ, ವಿಶ್ವದಲ್ಲಿ 200ಕ್ಕೂ ಹೆಚ್ಚು ದೇಶಗಳಿವೆ. ಆದರೆ ಹಿಂದೂಸ್ತಾನದಂತಹ ದೇಶ ಬೇರೆ ಎಲ್ಲಿಯೂ ಇಲ್ಲ. ದೇಶದಲ್ಲಿ ಎಲ್ಲ ಧರ್ಮೀಯರು ಪರಸ್ಪರ ಜತೆಗೂಡಿ ಸಂಭ್ರಮದಿಂದ ಹಬ್ಬಗಳನ್ನು ಆಚರಿಸುವುದು ವಿಶೇಷ. ಅದರಂತೆ ಪೂರ್ವಜರು ಸಾವಿರಾರು ವರ್ಷಗಳಿಂದ ನಡೆಸಿಕೊಂಡು ಬಂದ ಪರಂಪರೆಯಂತೆ ನಾವೆಲ್ಲರೂ ನಡೆಯೋಣ. ಸಮಾಜದಲ್ಲಿ ಶಾಂತಿ ನೆಲೆಸಿದಾಗ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಹು-ಧಾ ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ, ಹಿಂದಿನಿಂದಲೂ ನಗರದಲ್ಲಿ ಯಾವುದೇ ಹಬ್ಬವಾದರೂ ಎಲ್ಲ ಸಮಾಜದವರು ಸಹಕಾರ ನೀಡಿದ್ದಾರೆ. ಅದೇ ರೀತಿ ಈ ಬಾರಿಯೂ ನಮ್ಮೊಂದಿಗೆ ಸಹಕರಿಸಬೇಕು. ಆ ಮೂಲಕ ಶಾಂತಿ ಸೌಹಾರ್ದದಿಂದ ಹಬ್ಬಗಳನ್ನು ಆಚರಿಸಬೇಕು ಎಂದು ಹೇಳಿದರು.

ಪರೀಕ್ಷೆಗೆ ಅಡ್ಡಿಯಾಗದಿರಲಿ

ದಲಿತ ಮುಖಂಡ ಗುರುನಾಥ ಉಳ್ಳಿಕಾಶಿ, ಹೋಳಿ ಹಬ್ಬದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು. ಹಲಗಿ ಬಾರಿಸುವುದರಿಂದ ಅವರ ಅಧ್ಯಯನಕ್ಕೆ ಸಮಸ್ಯೆಯಾಗುತ್ತದೆ. ಆದ್ದರಿಂದ ಅವರಿಗೆ ತೊಂದರೆಯಾಗದಂತೆ ಹಬ್ಬ ಆಚರಿಸಬೇಕು ಎಂದು ನುಡಿದರು.

ಕಾಂಗ್ರೆಸ್‌ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ, ಮಾಜಿ ಸಂಸದ ಐ.ಜಿ.ಸನದಿ ಮಾತನಾಡಿದರು. ಮುಸ್ಲಿಂ ಧರ್ಮಗುರು ತಾಜುದ್ದೀನ್‌ ಖಾದ್ರಿಪೀರಾ, ಕ್ರಿಶ್ಚಿಯನ್‌ ಗುರು ಜೋಸೆಫ್‌ ಲಾಸಿಫ್‌, ಸಿಖ್‌ ಧರ್ಮಗುರು ಮೇಜರ್‌ ಗ್ಯಾನಿಸಿಂಗ್‌, ಎಸ್‌ಎಸ್‌ಕೆ ಸಮಾಜ ಮುಖಂಡ ಸತೀಶ ಮೆಹರವಾಡೆ, ಜೈನ ಸಮಾಜದ ಮುಖಂಡ ಮಹೇಂದ್ರ ಸಿಂಘಿ, ರಾಜಣ್ಣ ಕೊರವಿ, ಡಿಸಿಪಿಗಳಾದ ರಾಜೀವ ಪಿ., ರವೀಶ್‌ ಆರ್‌., ಎಸಿಪಿ ಶಿವಪ್ರಕಾಶ ನಾಯ್ಕ ಸೇರಿದಂತೆ ಇತರರು ಇದ್ದರು.