ರಾಯಣ್ಣರ ಜಯಂತಿ, ಪುಣ್ಯತಿಥಿ ದೊಡ್ಡ ಮಟ್ಟದಲ್ಲಿ ಆಚರಿಸಿ

| Published : Aug 16 2024, 01:47 AM IST

ಸಾರಾಂಶ

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಜನ್ಮದಿನದ ಪ್ರಯುಕ್ತ ಬೆಂಗಳೂರು ರೈಲ್ವೆ ನಿಲ್ದಾಣ ಬಳಿಯ ರಾಯಣ್ಣ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿ ರಾಯಣ್ಣನ ಜನ್ಮದಿನವನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತ್ಯೋತ್ಸವ ಹಾಗೂ ಪುಣ್ಯತಿಥಿ ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ಆಚರಣೆ ಮಾಡಬೇಕು ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಜಯಂತಿ ಪ್ರಯುಕ್ತ ಸಂಗೊಳ್ಳಿರಾಯಣ್ಣ ಕೇಂದ್ರ ರೈಲ್ವೆ ನಿಲ್ದಾಣದ ಎದುರಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿನ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಈ ಕಾರ್ಯಕ್ರಮವನ್ನು ಬಹಳ ತರಾತುರಿಯಲ್ಲಿ ಹಾಗೂ ಕಡಿಮೆ ಜಾಗ ಇರುವ ಕಡೆ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತ, ಬ್ರಿಟೀಷರ ವಿರುದ್ಧ ಹೋರಾಡಿದ ವೀರ ಯೋಧ. ಅವರು ಹುಟ್ಟಿದ ದಿನ ಸ್ವಾತಂತ್ರ್ಯ ದಿನಾಚರಣೆ, ಬ್ರಿಟೀಷರು ಅವರನ್ನು ನೇಣು ಬಿಗಿದ ದಿನ ಗಣರಾಜ್ಯೋತ್ಸವ. ಅವರು ನಮ್ಮೆಲ್ಲರಿಗೂ ಸ್ಫೂರ್ತಿ. ಹೀಗಾಗಿ ಅವರ ಜಯಂತಿ ಹಾಗೂ ಪುಣ್ಯತಿಥಿ ಎರಡನ್ನೂ ದೊಡ್ಡ ಮಟ್ಟದಲ್ಲಿ ಆಚರಣೆ ಮಾಡಬೇಕು ಎಂದು ಹೇಳಿದರು.

ಇನ್ನು ಮುಂದೆ ಇಂತಹ ಚಿಕ್ಕ ಜಾಗದಲ್ಲಿ ಕಾರ್ಯಕ್ರಮ ಮಾಡಬಾರದು. ರವೀಂದ್ರ ಕಲಾಕ್ಷೇತ್ರ ಅಥವಾ ಬೇರೆ ಯಾವುದಾದರೂ ದೊಡ್ಡ ವೇದಿಕೆಗಳಲ್ಲಿ ಕಾರ್ಯಕ್ರಮ ಮಾಡಬೇಕು. ಈ ಬಗ್ಗೆ ಈಗಲೇ ಬಿಬಿಎಂಪಿಯವರಿಗೆ ಸೂಚನೆ ನೀಡುತ್ತಿದ್ದೇನೆ ಎಂದರು.ಇದೇ ವೇಳೆ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹೆಸರನ್ನು ನಾಮಕರಣ ಮಾಡಲು ನಡೆಸಿದ ಹೋರಾಟವನ್ನು ಮೆಲುಕು ಹಾಕಿದರು. ಖೋಡೆಸ್‌ ವೃತ್ತಕ್ಕೆ ಸಂಗೊಳ್ಳಿರಾಯಣ್ಣ ಅವರ ಹೆಸರಿಟ್ಟಿದ್ದು ಹಾಗೂ ಪ್ರತಿಮೆ ಪ್ರತಿಷ್ಠಾಪನೆ ಮಾಡಿಸಿದ್ದು, ಮೇಲ್ಸೇತುವೆಗೆ ಹೆಸರು ನಾಮಕಾರಣ ಮಾಡಿದ್ದನ್ನೂ ನೆನೆಸಿಕೊಂಡರು.

ನಿಡುಮಾಮಿಡಿ ಮಹಾಸಂಸ್ಥಾನದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್, ಬಿಬಿಎಂಪಿ ಮಾಜಿ ಮೇಯರ್‌ ಡಿ.ವೆಂಕಟೇಶಮೂರ್ತಿ ಹಾಜರಿದ್ದರು.

ಸಿಎಂ ಕೈಯಲ್ಲಿ ನಿಂಬೆಹಣ್ಣು

ಸಂಗೊಳ್ಳಿ ರಾಯಣ್ಣ ಜಯಂತಿಗೆ ಕೈಯಲ್ಲಿ ನಿಂಬೆ ಹಣ್ಣು ಹಿಡಿದು ಬಂದ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ಉದ್ದಕ್ಕೂ ನಿಂಬೆಹಣ್ಣು ಕೈಯಲ್ಲೇ ಹಿಡಿದಿದ್ದರು. ಭಾಷಣದ ವೇಳೆಯೂ ನಿಂಬೆಹಣ್ಣು ಕೈಯಲ್ಲೇ ಇತ್ತು. ಇದು ಕುತೂಹಲ ಮೂಡಿಸಿತು.