ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಲಾಲ್‌ ಬಾಗ್‌ನಲ್ಲಿ ಆಯೋಜನೆ ಮಾಡಿರುವ ಫಲಪುಷ್ಪ ಪ್ರದರ್ಶನಕ್ಕೆ ನೂಕು ನುಗ್ಗಲು

| Published : Aug 16 2024, 01:46 AM IST / Updated: Aug 16 2024, 10:13 AM IST

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಲಾಲ್‌ ಬಾಗ್‌ನಲ್ಲಿ ಆಯೋಜನೆ ಮಾಡಿರುವ ಫಲಪುಷ್ಪ ಪ್ರದರ್ಶನಕ್ಕೆ ನೂಕು ನುಗ್ಗಲು
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಲಾಲ್‌ ಬಾಗ್‌ನಲ್ಲಿ ಆಯೋಜನೆ ಮಾಡಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಮಾದರಿಯ ಫಲಪುಷ್ಪ ಪ್ರದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು.

 ಬೆಂಗಳೂರು :  ಸ್ವಾತಂತ್ರ್ಯ ದಿನವಾದ ಗುರುವಾರ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಎಲ್ಲಿ ನೋಡಿದರಲ್ಲಿ ಜನವೋ...ಜನ. ಒಂದೇ ದಿನ ಬರೋಬ್ಬರಿ 2.10 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದು ₹92.50 ಲಕ್ಷಕ್ಕೂ ಅಧಿಕ ಶುಲ್ಕ ಸಂಗ್ರಹವಾಗಿರುವುದು ದಾಖಲೆಯಾಗಿದೆ.

ಮುಂಜಾನೆ 8 ಗಂಟೆಯಿಂದಲೇ ಜನರು ಸಾಗರೋಪಾದಿಯಲ್ಲಿ ಆಗಮಿಸಲು ಪ್ರಾರಂಭಿಸಿದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾಲಿಡಲು ಜಾಗವಿಲ್ಲದಷ್ಟು ಜನರಿಂದ ಲಾಲ್‌ಬಾಗ್‌ ತುಂಬಿಕೊಂಡಿತ್ತು. ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಸಂಸತ್‌ ಭವನದ ಪ್ರತಿಕೃತಿ ಮುಂದೆ 12 ಅಡಿ ಎತ್ತರದ ಅಂಬೇಡ್ಕರ್‌ ಪ್ರತಿಮೆ, ಗಾಜಿನ ಮನೆಯ ಬಲಭಾಗದಲ್ಲಿ ಅಂಬೇಡ್ಕರ್‌ ಜನ್ಮ ಸ್ಥಳದ ಸ್ಮಾರಕದ ಮಾದರಿ ಸೇರಿದಂತೆ ಅಂಬೇಡ್ಕರ್‌ ವಿಷಯಾಧಾರಿತ ವಿವಿಧ ರಚನೆಗಳು ಜನಮನ ಸೂರೆಗೊಂಡಿತು.

ಗಾಜಿನಮನೆಯಲ್ಲಿ ನೂಕು ನುಗ್ಗಲು:  ಗಾಜಿನ ಮನೆಯಲ್ಲಿ ಹಲವರು ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದರಿಂದ ನೂಕುನುಗ್ಗಲು ಉಂಟಾಗಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಜನದಟ್ಟಣೆ ನಿರ್ಮಾಣವಾಗಿತ್ತು. ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿದವರೂ ಒಳಹೋಗಲು ಪರದಾಡಬೇಕಾಯಿತು.

ಸಂಚಾರ ದಟ್ಟಣೆ:  ಗುರುವಾರ ಸ್ವಾತಂತ್ರ್ಯ ದಿನದ ಪ್ರಯುಕ್ತ ರಜೆ ಇದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಿವಿಧ ವಾಹನಗಳಲ್ಲಿ ಆಗಮಿಸಿದ್ದರು. ಇದರಿಂದ ಲಾಲ್‌ಬಾಗ್‌ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಯಿತು. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಆಗಸ್ಟ್‌ 8ರಂದು ಫಲಪುಷ್ಪ ಆರಂಭಗೊಂಡು ಆ.14ರವರೆಗೆ ಸಂಗ್ರಹವಾಗಿದ್ದು ಕೇವಲ ₹1.03 ಕೋಟಿಗಳು ಮಾತ್ರ. ಆದರೆ ಆ.15ರಂದು ಒಂದೇ ದಿನ ₹92.50 ಲಕ್ಷ ಟಿಕೆಟ್‌ ಶುಲ್ಕದಿಂದ ಸಂಗ್ರಹವಾಗಿದೆ. ಸುಮಾರು 2.10 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ವಯಸ್ಕರು 1,28,500 ಮತ್ತು ಮಕ್ಕಳು 81500 ಮಂದಿ ಆಗಮಿಸಿದ್ದರು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌ ಅವರು ತಿಳಿಸಿದ್ದಾರೆ.