ಸಾರಾಂಶ
ಆಲಮಟ್ಟಿ : ಆಲಮಟ್ಟಿಯ ಡ್ಯಾಂನ ರಾಕ್, ಕೃಷ್ಣಾ, ಲವಕುಶ ಸೇರಿದಂತೆ 77 ಎಕರೆ ಪ್ರದೇಶದಲ್ಲಿ ಒಂದು ಸಂಗೀತ ಕಾರಂಜಿಯುಳ್ಳ ಮತ್ತು ಇನ್ನೊಂದು ಉದ್ಯಾನವನ್ನು ನಿರ್ಮಿಸಲಾಗುತ್ತಿದ್ದು, ಅದಕ್ಕೆ ಪ್ರವೇಶ ದರ ಆಕರಣೆಗಾಗಿ ಟೆಂಡರ್ ಕರೆಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಕೆಬಿಜೆಎನ್ಎಲ್ ಎಂಡಿ ಕೆ.ಪಿ.ಮೋಹನರಾಜ್ ತಿಳಿಸಿದರು.
ಆಲಮಟ್ಟಿಯಲ್ಲಿನ ಪ್ರಧಾನ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿನ ಹಳೆಯ ಚಿತ್ರಗಳ ಗ್ಯಾಲರಿ ವೀಕ್ಷಿಸಿದ ನಂತರ ಸುದ್ದಿಗಾರರಿಗೆ ಅವರು ಈ ಮಾಹಿತಿ ನೀಡಿದರು. ಕೆಬಿಜೆಎನ್ಎಲ್‌ನಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿ, ಹೊರಗುತ್ತಿಗೆ ಸಿಬ್ಬಂದಿ, ದಿನಗೂಲಿ ಕಾರ್ಮಿಕರಿಗೆ ಸಕಾಲಕ್ಕೆ ವೇತನ ಆಗಲು ಯಾವುದೇ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಕಾಲುವೆಯ ದುರಸ್ತಿಯ ಕ್ಲೋಸರ್ ಕಾಮಗಾರಿಯ ಟೆಂಡರ್ ಪೂರ್ಣಗೊಂಡಿದ್ದು, ಕಾಮಗಾರಿ ಆರಂಭಗೊಂಡಿದೆ. ಕಾಲುವೆಗಳ ಜಾಲಗಳಿಗೆ ನೀರು ಬಿಡುವಲ್ಲಿ ಎಲ್ಲಿಯಾದರೂ ತೊಂದರೆಯಾದರೆ ಅಲ್ಲಿ ನೀರು ನಿಲ್ಲಿಸಿ ಕಾಮಗಾರಿಯನ್ನು ನಿರ್ವಹಿಸಬೇಕು. ಇಲ್ಲದಿದ್ದರೇ ಕಾಲುವೆಗೆ ನೀರು ಹರಿಯದ ವೇಳೆಯಲ್ಲಿ ಕ್ಲೋಸರ್ ಕಾಮಗಾರಿ ನಿರ್ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಆಲಮಟ್ಟಿ ಜಲಾಶಯ ಭರ್ತಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಆ.21 ರಂದು ಕೃಷ್ಣೆಗೆ ಬಾಗಿನ ಅರ್ಪಿಸಲಿದ್ದಾರೆ ಎಂದು ತಿಳಿಸಿದರು.
ಆಲಮಟ್ಟಿ ಜಲಾಶಯವನ್ನು 519.6 ಮೀ. ನಿಂದ 522 ಮೀವರೆಗೆ ಎತ್ತರಿಸುವುದರಿಂದ ಬಾಧಿತಗೊಳ್ಳುವ ಜಮೀನಿಗೆ ಮೊದಲ ಹಂತದಲ್ಲಿ ಹಾಗೂ 522 ಮೀ. ನಿಂದ 524.256 ಮೀಗೆ ಎತ್ತರಿಸುವುದರಿಂದ ಜಲಾವೃತಗೊಳ್ಳುವ ಜಮೀನಿಗಳಿಗೆ ಎರಡನೇ ಹಂತದಲ್ಲಿ ಪರಿಹಾರ ಕೊಡಲು ಕೆಬಿಜೆಎನ್ಎಲ್ ಬೋರ್ಡ್ ತೀರ್ಮಾನಿಸಿದೆ ಎಂದರು.
ಈ ವೇಳೆ ಕಾರ್ಯನಿರ್ವಾಹಕ ಎಂಜಿನಿಯರ್ ಡಾ.ಸುಧೀರ ಸಜ್ಜನ ಮುಂತಾದವರು ಇದ್ದರು.ಆಲಮಟ್ಟಿಯ ಪ್ರಧಾನ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿನ ಆಲಮಟ್ಟಿ ಜಲಾಶಯದ ಹಳೆ ಫೋಟೋಗಳನ್ನು ವೀಕ್ಷಣಾ ಗ್ಯಾಲರಿಯಲ್ಲಿ ಕೆಬಿಜೆಎನ್ ಎಲ್ ಎಂಡಿ ಕೆ.ಪಿ.ಮೋಹನರಾಜ ವೀಕ್ಷಿಸಿದರು.
20 ಸಾವಿರಕ್ಕೂ ಅಧಿಕ ಮೇಲ್ಮನವಿ ಸಲ್ಲಿಕೆ
ಕೃಷ್ಣಾ ಮೇಲ್ದಂಡೆ ಯೋಜನೆ(ಯುಕೆಪಿ)ಯ ಭೂಸ್ವಾಧೀನಗೊಂಡ ಜಮೀನಿಗೆ ಹೆಚ್ಚಿನ ಪರಿಹಾರಕ್ಕಾಗಿ ವಿವಿಧ ಹಂತದ ನ್ಯಾಯಾಲಗಳಲ್ಲಿ 20 ಸಾವಿರಕ್ಕೂ ಅಧಿಕ ರೈತರು ಮೇಲ್ಮನವಿ ಸಲ್ಲಿಸಿದ್ದಾರೆ. ಇಲ್ಲಿಯವರೆಗೆ ಈ ಪ್ರಕರಣಗಳನ್ನು ಕಂದಾಯ ಇಲಾಖೆಯೇ ನಿಭಾಯಿಸುತ್ತಿತ್ತು. ಆದರೆ, ಈಗ ಕೃಷ್ಣಾ ಭಾಗ್ಯ ಜಲ ನಿಗಮವನ್ನು ಎರಡನೇ ಪಾರ್ಟಿಯನ್ನಾಗಿ ಮಾಡಲಾಗುತ್ತಿದೆ. ಹೀಗಾಗಿ ಈ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಶೀಘ್ರವೇ ತಜ್ಞ ವಕೀಲರ ತಂಡವುಳ್ಳ ಕಾನೂನು ಕೋಶವನ್ನು ರಚಿಸಲಾಗುವುದು.
ಈಗಾಗಲೇ ಆಲಮಟ್ಟಿಯಲ್ಲಿ ಇದಕ್ಕಾಗಿ ನೋಡಲ್ ಅಧಿಕಾರಿಯನ್ನಾಗಿಯೂ ಕಾರ್ಯನಿರ್ವಾಹಕ ಎಂಜಿನಿಯರ್ ಒಬ್ಬರನ್ನು ನೇಮಿಸಲಾಗಿದೆ ಎಂದು ಮೋಹನರಾಜ ಮಾಹಿತಿ ನೀಡಿದರು. ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಬಾಧಿತಗೊಂಡ ಸಂತ್ರಸ್ತರಿಗೆ ಮುಳುಗಡೆ ಪ್ರಮಾಣಪತ್ರ ನೀಡಲು ಆಗಿರುವ ತಾಂತ್ರಿಕ ತೊಂದರೆ ನಿವಾರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿಯೂ ಮೋಹನರಾಜ ತಿಳಿಸಿದರು.