ವೈವಿಧ್ಯತೆಯಿಂದಲೆ ದೇಶದಲ್ಲಿ ಸ್ಥಿರತೆ: ಕುಲಪತಿ ಪ್ರೊ.ಶರತ್ ಅನಂತಮೂರ್ತಿ

| Published : Aug 16 2024, 01:05 AM IST

ಸಾರಾಂಶ

ಶಂಕರಘಟ್ಟದಲ್ಲಿರುವ ಕುವೆಂಪು ವಿವಿ ಆವರಣದಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಧ್ವಜಾರೋಹಣ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಮಗೆ ಲಭಿಸಿರುವ ಸ್ವಾತಂತ್ರ್ಯದ ಸ್ವರೂಪವನ್ನು ಮರುಚಿಂತನೆ ಮಾಡಿಕೊಳ್ಳುವ ಅಗತ್ಯ ಇದೆ. ಭಾರತದ ಪ್ರಜಾತಂತ್ರ ವ್ಯವಸ್ಥೆಯ ಅನುಷ್ಠಾನದಲ್ಲಿ ಸಣ್ಣಪುಟ್ಟ ಊನಗಳಿದ್ದರೂ, ಜಗತ್ತಿನ ಶ್ರೇಷ್ಠ ರಾಷ್ಟ್ರಗಳಲ್ಲಿ ಒಂದಾಗಿ ಸ್ಥಿರತೆ ಕಾಯ್ದುಕೊಂಡಿದೆ ಎಂದು ಕುವೆಂಪು ವಿಶ್ವವಿದ್ಯಾಲದ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಅಭಿಪ್ರಾಯಟ್ಟರು.

ಕುವೆಂಪು ವಿವಿ ಆವರಣದಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ದೇಶದ ವಿವಿಧ ಭಾಗಗಳಲ್ಲಿನ ವೈವಿಧ್ಯತೆಯೇ ನಮ್ಮ ಶಕ್ತಿ. ದೇಶದ ಉದ್ದಗಲಕ್ಕೂ ಹಬ್ಬಿರುವ ಈ ಬಹುಸಂಸ್ಕೃತಿಯನ್ನು ಒಪ್ಪಿಕೊಂಡು ಸಹೋದರ ಭಾವದಿಂದ ಶಾಂತಿಯುತವಾಗಿ ನೆಲೆಸಲು ಸಂವಿಧಾನ ನಮಗೆ ದಾರಿದೀಪವಾಗಿದೆ ಎಂದರು.

ಕುಲಸಚಿವ ಎ.ಎಲ್.ಮಂಜುನಾಥ್ ಮಾತನಾಡಿ, ದೇಶ ಇಂದು ಬಡತನ, ನಿರುದ್ಯೋಗ ಮತ್ತಿತರ ಜ್ವಲಂತ ಸಮಸ್ಯೆಗಳಿದ್ದರೂ ಅನ್ಯಾಯ, ಅಸೂಯೆ, ಅಸಹಕಾರ, ಅಧರ್ಮಗಳಿಂದ ಮುಕ್ತವಾದ ಸಮ ಸಮಾಜದ ನಿರ್ಮಾಣ ನಮ್ಮೆಲ್ಲರ ಗುರಿಯಾಗಿರಬೇಕು ಎಂದರು.

ಪರೀಕ್ಷಾಂಗ ಕುಲಸಚಿವ ಪ್ರೊ.ಎಸ್.ಎಂ.ಗೋಪಿನಾಥ್, ಪ್ರೊ.ಎನ್.ಡಿ.ವಿರೂಪಾಕ್ಷ, ಪ್ರೊ.ಗಜಾನನ ಪ್ರಭು, ಡಾ. ರವೀಂದ್ರ ಗೌಡ, ವಿವಿಧ ನಿಕಾಯಗಳ ಡೀನರು, ಪ್ರಾಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.