ಹಬ್ಬದಂತೆ ಶಾಲಾ ಪ್ರಾರಂಭೋತ್ಸವ ಆಚರಿಸಿ: ಬಿಇಒ

| Published : May 26 2024, 01:37 AM IST

ಸಾರಾಂಶ

2024 -25ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ಶಿಕ್ಷಕರು ಹಬ್ಬದಂತೆ ಆಚರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ. ಕುಂದರಗಿ ಮುಖ್ಯಶಿಕ್ಷಕರಿಗೆ ಸೂಚಿಸಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ 2024 -25ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ಶಿಕ್ಷಕರು ಹಬ್ಬದಂತೆ ಆಚರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ. ಕುಂದರಗಿ ಮುಖ್ಯಶಿಕ್ಷಕರಿಗೆ ಸೂಚಿಸಿದರು.

ಶನಿವಾರ ಪಟ್ಟಣದ ಪಿ.ಇ. ಟ್ರಸ್ಟ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಗುಳೇದಗುಡ್ಡ ವಲಯದ ಮುಖ್ಯಶಿಕ್ಷಕರ ಸಭೆ ಉದ್ಘಾಟಿಸಿ ಮಾತನಾಡಿ, ಶಾಲೆಗಳಿಗೆ ಸುಣ್ಣ, ಬಣ್ಣ ಹಚ್ಚಿ ತಳಿರು, ತೋರಣದಿಂದ ಅಲಂಕಾರ ಮಾಡಬೇಕು. ಶೈಕ್ಷಣಿಕ ಮಾರ್ಗಸೂಚಿಯಂತೆ ಕ್ರಿಯಾಯೋಜನೆ ತಯಾರಿಸಿ ಸರಿಯಾಗಿ ಅನುಷ್ಠಾನ ಮಾಡಬೇಕು. ಇಲಾಖೆಯ ನಿಯಮಗಳು ಮತ್ತು ನಿರ್ವಹಿಸಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ನೀಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನವರ ಮಾತನಾಡಿ, ಇಲಾಖೆಯ ಮಾರ್ಗಸೂಚಿಯಂತೆ ಕಾರ್ಯಕ್ರಮ ಹಮ್ಮಿಕೊಂಡು, ಮಕ್ಕಳಿಗೆ ಮೆನುವಿನಂತೆ ಬಿಸಿಯೂಟ ನೀಡಬೇಕು. ಮೊದಲ ದಿನವೇ ಸಿಹಿಯೂಟ ನೀಡಬೇಕು. ಪ್ರತಿದಿನ ಬಿಸಿಯೂದ ಹಾಜರಾತಿಯನ್ನು ಮುಖ್ಯಶಿಕ್ಷಕರು ಎಸ್.ಎಂ.ಎಸ್. ಕಳುಹಿಸಬೇಕು. ದಾಖಲಾತಿ ಹೆಚ್ಚಳ ಮಾಡಬೇಕು. ದಾಖಲಾದ ಎಲ್ಲಾ ಮಕ್ಕಳು ಪೂರ್ಣಪ್ರಮಾಣದಲ್ಲಿ ಹಾಜರಾಗಬೇಕು. ಹಾಜರಾದ ಮಾಹಿತಿಯನ್ನು ಎಸ್.ಎ.ಟಿ.ಎಸ್.ನಲ್ಲಿ ನಮೂದಿಸಬೇಕು. ಯಾವುದೇ ಲೋಪವಾಗದಂತೆ ಕಾರ್ಯಕ್ರಮ ಅನುಷ್ಠಾನ ಮಾಡಿ, ಮಕ್ಕಳಿಗೆ ಸರ್ಕಾರದ ಎಲ್ಲ ಯೋಜನೆಯ ಲಾಭ ದೊರಕಿಸಿಕೊಡಬೇಕು ಎಂದು ಸಲಹೆ ನೀಡಿದರು.

ವೇದಿಕೆ ದೈಹಿಕ ಪರಿವೀಕ್ಷಕ ಡಿ.ಎಚ್. ಹಳಗೇರಿ, ಶಿಕ್ಷಣ ಸಂಯೋಜಕ ಎಂ.ಸಿ. ನಾಲತವಾಡ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಂಗಮೇಶ ಯಲಿಗಾರ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಎಸ್. ಮಜ್ಜಗಿ, ಸಿ.ಆರ್.ಪಿ. ಮಂಜುನಾಥ ಉಂಕಿ, ಮುಖ್ಯಶಿಕ್ಷಕ ಎಸ್.ಎಸ್. ಪಟ್ಟಣಶೆಟ್ಟಿ ಇದ್ದರು. ಗುಳೇದಗುಡ್ಡ ಪೂರ್ವ, ಪಶ್ಚಿಮ, ಲಾಯದಗುಂದಿ ಮತ್ತು ಕೋಟೆಕಲ್ ಕ್ಲಸ್ಟರಿನ ಎಲ್ಲ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಮುಖ್ಯಶಿಕ್ಷಕರು ಉಪಸ್ಥಿತರಿದ್ದರು.