ಗೌರಿ ಗಣೇಶ ಹಬ್ಬವನ್ನು ಕಾನೂನಿನ ಚೌಕಟ್ಟಿನಡಿ ಶಾಂತಿ ಹಾಗೂ ಸೌಹಾರ್ದದಿಂದ ಆಚರಿಸುವಂತೆ ಗಣೇಶೋತ್ಸವ ಮಂಡಳಿಯ ಪದಾಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಡಿವೈಎಸ್‍ಪಿ ಲೋಕೇಶ್ವರಪ್ಪ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಕಮಲಾಪುರ

ಗೌರಿ ಗಣೇಶ ಹಬ್ಬವನ್ನು ಕಾನೂನಿನ ಚೌಕಟ್ಟಿನಡಿ ಶಾಂತಿ ಹಾಗೂ ಸೌಹಾರ್ದದಿಂದ ಆಚರಿಸುವಂತೆ ಗಣೇಶೋತ್ಸವ ಮಂಡಳಿಯ ಪದಾಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಡಿವೈಎಸ್‍ಪಿ ಲೋಕೇಶ್ವರಪ್ಪ ಸೂಚನೆ ನೀಡಿದರು.ಪಟ್ಟಣದ ರೇವಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಗಣೇಶ್ ಹಬ್ಬದ ನಿಮಿತ್ತ ಶುಕ್ರವಾರ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಗಣೇಶ ಹಬ್ಬ ಎಲ್ಲ ಸಮುದಾಯದವರು ಸೌಹಾರ್ದತೆ ಹಾಗೂ ಭಾವೈಕ್ಯತೆಯಿಂದ ಆಚರಿಸಬೇಕು. ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಕೂರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸುವ ಸಂಘಟಕರು, ಪಪಂ, ಜೆಸ್ಕಾಂ ಹಾಗೂ ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದರು.ಶಾಂತಿ ಪಾಲನೆ ದೃಷ್ಟಿಯಿಂದ ಮದ್ಯಪಾನ ಮಾರಾಟ ನಿಷೇಧಿಸಲಾಗಿದೆ. ಗಣೇಶ ಪ್ರತಿಷ್ಠಾಪನೆ ದಿನದಿಂದ ವಿಸರ್ಜನೆ ದಿನದವರೆಗೂ ವಿದ್ಯುತ್‌ ಪೂರೈಕೆಯಲ್ಲಿ ತೊಂದರೆಯಾಗಬಾರದು. ಗಣೇಶ ಸ್ಥಾಪಿಸುವ ಪೆಂಡಾಲ್‌ಗಳಲ್ಲಿ ವಿದ್ಯುತ್‌ ಸಂಪರ್ಕ ಸುರಕ್ಷಿತದ ಬಗ್ಗೆ ಜೆಸ್ಕಾಂನವರು ತಂಡ ರಚಿಸಿಕೊಂಡು, ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.ತಹಸೀಲ್ದಾರ್ ಮಹಮ್ಮದ್ ಮೊಸಿನ ಮಾತನಾಡಿ, ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಲು ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿ ಬಳಸುವುದು ಸೂಕ್ತ. ಈ ವರ್ಷ ಮಳೆ ಇಲ್ಲದ ಕಾರಣ ಬರಗಾಲದ ಛಾಯಾ ಅವರಿಸಿದ್ದು. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಭಾವವಾಗುತ್ತಿದ್ದು ಕುಡಿವ ನೀರಿನ ಮೂಲಗಳಾದ ಬಾವಿ, ಕೆರೆಗಳಲ್ಲಿ ರಾಸಾಯನಿಕ ಬಣ್ಣಯುಕ್ತ ಗಣೇಶ ಮೂರ್ತಿಗಳನ್ನು ವಿಸರ್ಜಿಸಬಾರದು. ವಿಸರ್ಜನೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದು ಸಲಹೆ ನೀಡಿದರು.

ಸಿಪಿಐ ಶಿವಶಂಕರ್ ಸಾವು ಮಾತನಾಡಿದರು. ಪಿಎಸ್ಐಗಳಾದ ಸುಖಾನಂದ ಸಿಂಗೆ. ಚೇತನ್, ಜೆಸ್ಕಾಂ ಅಧಿಕಾರಿ ಪ್ರವೀಣ ಪಾಟೀಲ, ಕಾಂಗ್ರೆಸ್ ಮುಖಂಡರಾದ ಗುರುರಾಜ ಮಾಟುರ್, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಅಬ್ದುಲ್ ಸತ್ತರ್, ಮಾಜಿ ಗ್ರಾಪಂ ಅಧ್ಯಕ್ಷ ನಿಂಗಪ್ಪ ಪ್ರಭುದ್ದಕರ್, ಆನಂದ ವಾರಿಕರ್, ಸಂತೊಷ ರಾಂಪೂರೆ, ಶಿವಕುಮಾರ ದೋಶೆಟ್ಟಿ,ಉದಯ ಕುಮಾರ್ ರಟಗಲ, ಬಸವರಾಜ ಮಠಪತಿ, ಗಣೇಶ್ ವಿಸರ್ಜನೆ ಪದಾಧಿಕಾರಿಗಳು ಮುಖಂಡರು ಇದ್ದರು.

-----ಫೋಟೊ-----

ಕಮಲಾಪುರದಲ್ಲಿ ಗಣೇಶ್ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಡಿವೈಎಸ್ ಪಿ ಲೋಕೇಶ್ವರಪ್ಪ ಮಾತನಾಡಿದರು.