ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಜೀವಿಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ನೈಸರ್ಗಿಕ ಪರಿಸರವನ್ನು ಯಥಾವತ್ತಾಗಿ ಉಳಿಸಿ ಜೀವಿಯ ಏಳಿಗೆಯನ್ನು ಸಂಭ್ರಮಿಸಬೇಕು. ವನ್ಯಜೀವಿಗಳು ಪರಿಸರದ ಸಮತೋಲನ ಕಾಪಾಡುವಲ್ಲಿ ಬಹಳ ಪಾತ್ರ ವಹಿಸುತ್ತವೆ ಎಂದು ಜಮಖಂಡಿಯ ನಿವೃತ ಪ್ರಾಚಾರ್ಯ ಡಾ.ಎಸ್.ಎಸ್.ಸುವರ್ಣಖಂಡಿ ಹೇಳಿದರು.ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಲಾ, ವಿಜ್ಞಾನ ಮತ್ತು ಡಿಡಿಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ಸಹಯೋಗದಲ್ಲಿ ವನ್ಯಜೀವಿಗಳ ರಕ್ಷಣೆ ಜೀವ ವೈವಿಧ್ಯತೆಯ ಸಂರಕ್ಷಣೆ ವಿಷಯದ ಕುರಿತು ರಾಷ್ಟ್ರಮಟ್ಟದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಮನುಷ್ಯ ಪ್ರಕೃತಿಯನ್ನು ನಾಶಪಡಿಸುತ್ತಿರುವ ವೇಗ ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಪರಿಸರ ಸಂಕಟ ಎದುರಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಹೇಳಿದರು.ಕೊಲ್ಹಾಪುರ ಶಿವಾಜಿ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಆರ್.ಯಂಕಂಚಿ ಮಾತನಾಡಿ, ಜೀವ ವೈವಿಧ್ಯತೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ವನ್ಯಜೀವಿಗಳ ರಕ್ಷಣೆ ಕಾಯ್ಧೆಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದ ಅವರು, ಕಾಡು ನಾಶ, ಅಕ್ರಮ ಬೇಟೆ ಹಾಗೂ ಹವಾಮಾನ ಬದಲಾವಣೆಗಳಿಂದ ಅನೇಕ ಪ್ರಾಣಿ ಪಕ್ಷಿಗಳು ವಿನಾಶದ ಅಂಚಿನಲ್ಲಿವೆ. ಪ್ರಕೃತಿ ಉಳಿಸುವುದು ಎಂದರೆ ನಮ್ಮ ಜೀವ ಉಳಿಸಿಸಿದಂತೆಯೇ ಎಂದು ಅಭಿಪ್ರಾಯಪಟ್ಟರು.
ಪ್ರಾಚಾರ್ಯ ಎನ್. ಬಿ.ಪಾಟೀಲ್ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳಲ್ಲಿ ನೈಸರ್ಗಿಕ ಜೀವಿಯ ವೈವಿಧ್ಯತೆಯ ಮಹತ್ವವನ್ನು ತಿಳಿಸಬಹುದು. ಜತೆಗೆ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಹೆಚ್ಚಿಸಬಹುದು. ಇಂತಹ ಕಾರ್ಯಕ್ರಮಗಳು ಯುವಕರಲ್ಲಿ ಹೊಣೆಗಾರಿಕೆಯನ್ನು ಬೆಳೆಸುತ್ತವೆ ಎಂದು ಹೇಳಿದರು.
ವಿಚಾರ ಸಂಕಿರಣದಲ್ಲಿ ಪ್ರಥಮ ಸ್ಥಾನ ಬಿ.ಕೆ.ಕಾಲೇಜ ಬೆಳಗಾವಿಯ ವೈಷ್ಣವಿ ಕಿರಾಳೆ, ದ್ವಿತೀಯ ಸ್ಥಾನವನ್ನು ಬಿ.ಕೆ. ಕಾಲೇಜು ಚಿಕ್ಕೋಡಿಯ ಪೂಜಾ ಕೋರೆ ಹಾಗೂ ತುಂಗಳ ಕಾಲೇಜಿನ ಜಮಖಂಡಿಯ ಪ್ರೇರಣಾ ಶಿವಪಯ್ಯನಮಠ, ತೃತೀಯ ಸ್ಥಾನ ಜೆಎಸ್‌ಎಸ್ ಕಾಲೇಜ ಗೋಕಾಕನ ರಶ್ಮಿತಾ ರಾಯ್ಕರ್ ಹಾಗೂ ಬಿಎಲ್‌ಡಿಇ ಕಾಲೇಜು ವಿಜಯಪೂರನ ಅಶ್ವಿನಿ ಕಲಘಲಗಿ ಪಡೆದರು. ಸುಮಾರು ೪೬ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಡಾ.ಎಸ್.ಡಿ.ಸೋರಗಾಂವಿ, ಎಸ್.ಎಸ್.ಕೊಡಗನೂರ, ಸಿ.ಎಂ.ಗೆಣ್ಣೂರ, ಡಿ.ಎ.ನಾಯ್ಕ, ಡಾ.ಎಸ್.ಸಿ.ಬಿಜ್ಜರಗಿ, ಎಸ್.ಎಸ್.ಮುಗಳ್ಯಾಳ, ಎಸ್.ಎ.ಪಾಟೀಲ, ಎಸ್.ಟಿ.ದಿವಾನಜಿ ಸೇರಿ ಇತರರಿದ್ದರು.