ಶಾಲೆಯ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ಹಾಗೂ ಶಾಲಾ ಕೊಠಡಿಗಳ ಮತ್ತು ಮೈದಾನದ ಸ್ವಚ್ಛತೆಗೊಳಿಸಬೇಕು

ಕನಕಗಿರಿ: ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕೃತಗೊಳಿಸಿ ಪ್ರಾರಂಭೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ ಸೂಚಿಸಿದರು.

ಅವರು ಮಂಗಳವಾರ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೨೦೨೬-೨೭ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯವಾಗಿ ಶಾಲೆಯ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ಹಾಗೂ ಶಾಲಾ ಕೊಠಡಿಗಳ ಮತ್ತು ಮೈದಾನದ ಸ್ವಚ್ಛತೆಗೊಳಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳ ಬಳಿ ಮಕ್ಕಳು ಹೋಗದಂತೆ ಮುಂಜಾಗ್ರತೆ ವಹಿಸಬೇಕು. ಮೇ ೨೯ರಂದು ಶಾಲಾ ಪ್ರಾರಂಭೋತ್ಸವಕ್ಕೆ ಸ್ಥಳೀಯ ಎಸ್‌ಡಿಎಂಸಿ ಸದಸ್ಯರು, ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಈ ಬಾರಿ ಸರ್ಕಾರ ಶಿಕ್ಷಕರಿಗೆ ಕಡ್ಡಾಯ ಹಾಜರಾತಿ ಜಾರಿಗೊಳಿಸಿದ್ದು, ಬೆಳಗ್ಗೆ ೧೦ ಗಂಟೆಗೆ ಹಾಗೂ ಮಧ್ಯಾಹ್ನ ೪.೩೦ ಗಂಟೆಗೆ ದಿನಕ್ಕೆ ಎರಡು ಬಾರಿ ಹಾಜರಾತಿ ಕಡ್ಡಾಯವಾಗಿದೆ. ಇದನ್ನು ಶಿಕ್ಷಕರು ದಿನ ನಿತ್ಯ ಪಾಲಿಸಬೇಕು. ಪಾಲನೆ ಮಾಡದೆ ನಿರ್ಲಕ್ಷ ವಹಿಸಿದರೆ ಶಿಸ್ತು ಕ್ರಮವಾಗಲಿದೆ ಎಂದರು.

ನಂತರ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರೋಷಣ್ಣ ಮಾತನಾಡಿ, ಶಾಲಾ ಪ್ರಾರಂಭೋತ್ಸವ ದಿನವೇ ಸಮವಸ್ತ್ರ ವಿತರಣೆ ಹಾಗೂ ಬಿಸಿಯೂಟ ಆರಂಭಿಸಬೇಕು. ಇನ್ನೂ ಜೂ.೧ರಿಂದ ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಬೇಕು. ಶಾಲೆಯಲ್ಲಿ ೧ ರಂದು ಶಿಕ್ಷಕ ಪಾಲಕ ಪೋಷಕ ಮಹಾಸಭೆ ಕಡ್ಡಾಯವಾಗಿ ನಡೆಸಬೇಕು. ಮಧ್ಯಾಹ್ನದ ಬಿಸಿಯೂಟದ ಹಾಜರಾತಿ ಎಂಡಿಎಂನಲ್ಲಿ ಹಾಕಬೇಕು ಎಂದು ಕಟ್ಟುನಿಟ್ಟಾಗಿ ಆದೇಶಿಸಿದರು. ಬಿಆರ್‌ಸಿ ಗೀತಾ, ಸಿಆರ್‌ಪಿಗ ರಾಜೀವ್, ವಿಜಯಕುಮಾರ ಹೊಸಳ್ಳಿ, ಮುಖ್ಯೋಪಾಧ್ಯಾಯ ವೆಂಕಟ ಮಧುಸೂದನ, ಬಸಪ್ಪ, ಚಂದುಸಾಬ್‌, ಜಗದೀಶ ಹಾದಿಮನಿ, ತುಳಜಾ ನಾಯ್ಕ್, ಶಂಶಾದಬೇಗಂ, ಉಮೇಶ ಕಂದಕೂರು, ಶಿವಾನಂದ ಬೆಲ್ಲದ್, ಅಶೋಕ, ವೆಂಕೋಬ ಪೂಜಾರ, ರಾಮಣ್ಣ ಲಮಾಣಿ, ನಾಗರಾಜ ಸೇರಿದಂತೆ ಇತರರಿದ್ದರು.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳಿಗೆ ಶೂ ಮತ್ತು ಸಾಕ್ಸ್ ರಾಜ್ಯ ಮಟ್ಟದಿಂದಲೇ ವಿತರಿಸಲಾಗುತ್ತಿದೆ. ಈ ಬಾರಿಯ ಪುಸ್ತಕಗಳು ಎಲ್ಲ ವಿಷಯಗಳು ಕನ್ನಡಕ್ಕೆ ಅನುವಾದವಾಗುವಂತೆ ಪ್ರತಿ ಪುಟವನ್ನು ಮುದ್ರಿಸಲಾಗಿದೆ. ಇದರಿಂದ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಕಲಿಕೆಗೆ ಅನುಕೂಲವಾಗಲಿದೆ ಎಂದು ಗಂಗಾವತಿ ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ವಸ್ತ್ರದ್ ತಿಳಿಸಿದ್ದಾರೆ.