ಸಾರಾಂಶ
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಅನಾದಿಕಾಲದಿಂದಲೂ ಯಲ್ಲಾಪುರ ಶಾಂತಿಪ್ರಿಯತೆಗೆ ಗೌರವ ನೀಡುತ್ತ ಬಂದಿದೆ. ಇದನ್ನು ಸದಾ ಮುಂದುವರಿಸಿಕೊಂಡು ಹೋಗಬೇಕು. ಅದು ತಾಲೂಕಿನ ಹಿರಿಮೆ. ಆದರೆ, ಯುಗಾದಿ ಮತ್ತು ರಂಜಾನ್ ಹಬ್ಬ ಜೊತೆಯಾಗಿ ಬಂದಿರುವುದರಿಂದ ಸಹೋದರತ್ವದ ಭಾವನೆಯಿಂದ ಎರಡೂ ಸಮಾಜ ಬಂಧುಗಳು ಶಾಂತಿಯಿಂದ ಹಬ್ಬ ಆಚರಿಸುವಂತೆ ಸಹಾಯಕ ಚುನಾವಣಾ ಅಧಿಕಾರಿ ಅಜ್ಜಯ್ಯ ಸೊಗಲದ ಹೇಳಿದರು.ಏ. ೬ರಂದು ಶನಿವಾರ ಮಧ್ಯಾಹ್ನ ತಹಸೀಲ್ದಾರ ಕಚೇರಿಯಲ್ಲಿ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಯುಗಾದಿ ಮತ್ತು ರಂಜಾನ್ ಹಬ್ಬದ ಪೂರ್ವಭಾವಿ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ ಡಿಜೆ ಬಳಸಲು ಅವಕಾಶ ಇಲ್ಲ. ಸ್ತಬ್ಧ ಚಿತ್ರಗಳ ಪ್ರದರ್ಶನಕ್ಕೆ ಮಾತ್ರ ಅವಕಾಶವಿದೆ. ಯಾವುದೇ ರಾಜಕೀಯ ಪಕ್ಷದ ನಾಯಕರು ಅಥವಾ ರಾಜಕೀಯ ವ್ಯಕ್ತಿಗಳ ಪ್ರೇರಿತ ವೇದಿಕೆ ಮಾಡಬಾರದು. ಕೇವಲ ವೈಯಕ್ತಿಕ ಕುಟುಂಬಕ್ಕೆ ಸೀಮಿತವಾಗಿ ಹಬ್ಬಗಳನ್ನು ಆಚರಿಸಬೇಕು. ಸಾರ್ವಜನಿಕವಾಗಿಯೂ ಯಾವುದೇ ಅತಿಯಾದ ವರ್ಣರಂಜಿತ ಇರಬಾರದು ಎಂದರು.ಪೊಲೀಸ್ ನಿರೀಕ್ಷಕ ರಮೇಶ ಹಾನಾಪುರ ಮಾತನಾಡಿ, ಹಬ್ಬದ ಮೆರವಣಿಗೆಯಂದು ಚುನಾವಣೆಯ ನಿಯಮಾವಳಿಯನ್ನು ಪಾಲನೆ ಮಾಡಿ ಪರವಾನಗೆ ಪಡೆದುಕೊಳ್ಳಿ, ನಮ್ಮ ಹಬ್ಬಗಳ ಆಚರಣೆ ಇನ್ನೊಬ್ಬರಿಗೆ ತೊಂದರೆಯಾಗಬಾರದು. ಶಾಂತಿಯುತವಾಗಿ ಹಬ್ಬಗಳ ಆಚರಣೆ ನಡೆಯಲಿ. ಪೊಲೀಸ್ ಇಲಾಖೆ ಹಾಗೂ ತಾಲೂಕಾಡಳಿತ ಎಂದಿಗೂ ನಿಮ್ಮ ಜೊತೆ ಇರುತ್ತದೆ ಎಂದರು.
ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ, ೧೯೯೭, ೨೦೦೮ರಷ್ಟು ಹಿಂದಿನ ಪ್ರಕರಣ ಸಂಬಂಧಿಸಿ ಯಲ್ಲಾಪುರದಲ್ಲಿ ಎರಡು ಕೋಮಿನ ೬೮ಕ್ಕೂ ಹೆಚ್ಚು ಜನರ ಮೇಲೆ ಸೆಕ್ಷನ್ ೧೦೭ ಪ್ರಕರಣ ದಾಖಲಿಸಲಾಗಿದೆ. ಇದನ್ನು ಇಲಾಖಾಧಿಕಾರಿಗಳು ಗಮನಿಸಿ, ಪ್ರಕರಣ ಹಾಕಿಸಿಕೊಂಡವರು ಸನ್ನಡತೆಯಿಂದ ನಡೆಯುತ್ತಿದ್ದು, ಬಹಳಷ್ಟು ಹಳೆಯ ಪ್ರಕರಣಗಳನ್ನು ಬಿಟ್ಟು ಬಿಡಬೇಕು ಎಂದರು.ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಲ್ಲಿ ಚರ್ಚೆ ಮಾಡಿ, ಸಮಸ್ಯೆ ಬಗೆಹರಿಸುವುದಾಗಿ ಅಜ್ಜಯ್ಯ ಸೊಗಲದ ಭರವಸೆ ನೀಡಿದರು.
ತಹಸೀಲ್ದಾರ್ ತನುಜಾ ಸವದತ್ತಿ ಪ್ರತಿಕ್ರಿಯಿಸಿ, ಐದು ಅಥವಾ ಹತ್ತು ವರ್ಷ ಉತ್ತಮ ನಡತೆ ತೋರಿದರೆ ಅವರ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂದೆ ಪಡಯಲು ಅವಕಾಶವಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಬಗೆಹರಿಸುವ ಭರವಸೆ ನೀಡಿದರು.ಯುಗಾದಿ ಮೆರವಣಿಗೆಯಲ್ಲಿ ಡಿಜೆ ಬಳಸಿದರೇ ಮುಸ್ಲಿಂ ಸಮಾಜದವರ ಯಾವುದೇ ಸಮಸ್ಯೆಯಿಲ್ಲ ಎಂದು ಮುಸ್ಲಿಂ ಪ್ರಮುಖರಾದ ಮಹಮ್ಮದ ಹುಸೇನ್, ಫೈರೋಜ್ ಸಯ್ಯದ್, ಅಬ್ದುಲ್ ಕರೀಂ ಶೇಖ, ಇರ್ಷಾದ ಕಾಗಲಕರ್ ಸಭಗೆ ತಿಳಿಸಿದರು. ಈ ಕುರಿತು ಇರುವ ಸಾಧ್ಯತೆಗಳನ್ನು ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸಿ ತಿಳಿಸುವುದಾಗಿ ರಮೇಶ ಹಾನಾಪುರ ಹೇಳಿದರು.
ಪಿ.ಎಸ್.ಐ. ಸಿದ್ದು ಗುಡಿ, ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ಹಿಂದೂ ಪ್ರಮುಖರಾದ ಪ್ರದೀಪ ಯಲ್ಲಾಪುರಕರ, ಶ್ರೀನಿವಾಸ ಗಾಂವ್ಕರ್, ಭರತ ಹನುಮರೆಡ್ಡಿ, ರಜತ್ ಖಾನಾಪುರ, ಮುಸ್ಲಿಂ ಪ್ರಮುಖರಾದ ಮಹಮ್ಮದ ನಬೀಲ್ ಶೇಖ, ಅಲ್ತಾಫ್ ಮುಲ್ಲಾ, ಸಯ್ಯದ್ ಖಾಲಿದ್ ಸಲಾವುದ್ದಿನ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.