ಯುಗಾದಿ, ರಂಜಾನ್ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಿ: ಬಿ.ಸುಮರಾಣಿ

| Published : Apr 04 2024, 01:05 AM IST

ಯುಗಾದಿ, ರಂಜಾನ್ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಿ: ಬಿ.ಸುಮರಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ-ಮುಸ್ಲಿಂ ಬಾಂಧವರ ಭಾವನೆಗಳಿಗೆ ಧಕ್ಕೆಯಾಗದಂತೆ, ವದಂತಿಗಳಿಗೆ ಕಿವಿಗೊಡದಂತೆ ಹಬ್ಬ ಆಚರಿಸಬೇಕು. ಯಾವುದೇ ವಿಚಾರದ ಬಗ್ಗೆ ಪ್ರತ್ಯಕ್ಷವಾಗಿ ಕಂಡರೂ ಪ್ರಾಮಾಣಿಸಿ ನೋಡಬೇಕು. ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಕಿಡಿಗೇಡಿಗಳು ಹಾಗೂ ಸಮಾಜ ವಿಧ್ವಂಸಕ ಶಕ್ತಿಗಳು ಕಂಡು ಬಂದರೆ ಕೂಡಲೇ ಪೋಲಿಸರ ಗಮನಕ್ಕೆ ತನ್ನಿ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕೋಮು ಸೌಹಾರ್ದತೆಗೆ ಕೃಷ್ಣರಾಜಪೇಟೆ ತಾಲೂಕು ರಾಜ್ಯದಲ್ಲಿಯೇ ಮಾದರಿ. ಯುಗಾದಿ ಹಾಗೂ ರಂಜಾನ್ ಹಬ್ಬವನ್ನು ಹಿಂದೂ ಹಾಗೂ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸುವಂತೆ ಪೊಲೀಸ್‌ ಇನ್ಸ್‌ಪೆಕ್ಟರ್ ಬಿ.ಸುಮಾರಾಣಿ ಮನವಿ ಮಾಡಿದರು.

ಪಟ್ಟಣದ ಪಟ್ಟಣ ಪೊಲೀಸ್‌ ಠಾಣೆ ಸಭಾಂಗಣದಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬದ ಅಂಗವಾಗಿ ಕರೆಯಲಾಗಿದ್ದ ಹಿಂದೂ-ಮುಸ್ಲಿಂ ಬಾಂಧವರ ಪೂರ್ವಭಾವಿ ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡಿ, ಹಿಂದೂ ಬಾಂಧವರು ಆಚರಿಸುವ ಯುಗಾದಿ ಹಬ್ಬದಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸಿ ಒಬ್ಬಟ್ಟು ತುಪ್ಪವನ್ನು ತಿಂದು ಶುಭ ಕೋರುವುದು, ಮುಸ್ಲಿಂ ಬಾಂಧವರು ಉಪವಾಸ ವ್ರತ ನಡೆಸಿ ಭಕ್ತಿಯಿಂದ ಆಚರಿಸುವ ರಂಜಾನ್ ಹಬ್ಬದಲ್ಲಿ ಹಿಂದೂಗಳು ಭಾಗವಹಿಸಿ ಶುಭ ಹಾರೈಸುವುದು ಈ ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ ಎಂದರು.

ಹಿಂದೂ-ಮುಸ್ಲಿಂ ಬಾಂಧವರ ಭಾವನೆಗಳಿಗೆ ಧಕ್ಕೆಯಾಗದಂತೆ, ವದಂತಿಗಳಿಗೆ ಕಿವಿಗೊಡದಂತೆ ಹಬ್ಬ ಆಚರಿಸಬೇಕು. ಯಾವುದೇ ವಿಚಾರದ ಬಗ್ಗೆ ಪ್ರತ್ಯಕ್ಷವಾಗಿ ಕಂಡರೂ ಪ್ರಾಮಾಣಿಸಿ ನೋಡಬೇಕು. ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಕಿಡಿಗೇಡಿಗಳು ಹಾಗೂ ಸಮಾಜ ವಿಧ್ವಂಸಕ ಶಕ್ತಿಗಳು ಕಂಡು ಬಂದರೆ ಕೂಡಲೇ ಪೋಲಿಸರ ಗಮನಕ್ಕೆ ತಂದು ಕಿಡಿಗೇಡಿಗಳನ್ನು ಮಟ್ಟ ಹಾಕಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಯುಗಾದಿ ಹಬ್ಬದಲ್ಲಿ ಇಸ್ಪೀಟ್ ಸೇರಿದಂತೆ ಯಾವುದೇ ರೀತಿಯ ಜೂಜಾಟ ಆಡದಂತೆ ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಹಾಗೂ ಗ್ರಾಮಸ್ಥರು ಜೂಜಾಟ ಆಡದೇ ಸಹಕರಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಎಂ.ಕೆ.ಹರಿಚರಣತಿಲಕ್ ಮತ್ತು ಕೆ.ಆರ್.ನೀಲಕಂಠ ಸಭೆಯಲ್ಲಿ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಕೆ.ಗೌಸ್‌ಖಾನ್, ಛಲವಾಧಿ ಮಹಾಸಭಾ ಜಿಲ್ಲಾಧ್ಯಕ್ಷ ಮಾಂಬಳ್ಳಿ ಜಯರಾಂ, ಸೈಯ್ಯದ್ ಖಲೀಲ್, ನವೀದ್ ಅಹಮದ್, ಹಾಫೀಜುಲ್ಲಾ ಷರೀಫ್, ವಿಷ್ಣು ಮಂಜು, ಸೇರಿದಂತೆ ನೂರಾರು ಹಿಂದೂ ಮುಸ್ಲಿಂ ಭಾಂದವರು ಭಾಗವಹಿಸಿದ್ದರು.

ಪಟ್ಟಣ ಠಾಣೆ ಸಬ್ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ಹಲವರನ್ನು ಸ್ವಾಗತಿಸಿ, ವಂದಿಸಿದರು.