ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಈಗಿನ ಕರ್ನಾಟಕವು ದೇಶದ ವಿವಿಧ ರಾಜಪ್ರಭುತ್ವದ ರಾಜ್ಯಗಳು, ಮದ್ರಾಸ್ ಮತ್ತು ಬಾಂಬೆ ಪ್ರೆಸಿಡೆನ್ಸಿಗಳು ಮತ್ತು ನಿಜಾಮರ ಹೈದರಾಬಾದ್ ರಾಜ್ಯ ಸೇರಿದಂತೆ 20 ಕ್ಕೂ ಹೆಚ್ಚು ವಿವಿಧ ಪ್ರಾಂತ್ಯಗಳಾಗಿ ಹರಿದು ಹಂಚಿ ಹೋಗಿತ್ತು. ಮುಂದೆ ಅನೇಕ ಹೋರಾಟ, ಸತ್ಯಾಗ್ರಹ, ಚಳವಳಿಯ ಪ್ರತಿಫಲವಾಗಿ ಕರ್ನಾಟಕ ಏಕೀಕರಣ ಆಗಿ ಕರ್ನಾಟಕ ರಾಜ್ಯ ಉದಯವಾಯಿತು ಹುಟ್ಟಿಕೊಂಡಿತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ತಿಳಿಸಿದರು.ರಥಯಾತ್ರೆಗೆ ಸ್ವಾಗತ:ಜಿಲ್ಲೆಯ ಬಾಗೇಪಲ್ಲಿಯಿಂದ ತಾಲೂಕಿನ ಪೆರೇಸಂದ್ರ ಗ್ರಾಮ ಪಂಚಾಯಿತಿಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಭಾನುವಾರ ಸ್ವಾಗತಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
19 ನೇ ಶತಮಾನದಲ್ಲಿ ಆರಂಭವಾದ ಏಕೀಕರಣ ಚಳವಳಿ ಕರ್ನಾಟಕದ ಪಾಲಿಗೆ ಮರೆಯಲಾಗದ ದಿನ ಈ ನವೆಂಬರ್ 1, 1956. ಹರಿದು ಹಂಚಿ ಹೋಗಿದ್ದ ರಾಜ್ಯಗಳ ಭಾಷಾವಾರು ಮರು-ಸಂಘಟನೆಯ ಮೂಲಕ ದಕ್ಷಿಣ ಭಾರತದ ವಿವಿಧ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯದ ಅಡಿಯಲ್ಲಿ ತರಲಾಯಿತು ಎಂದರು.ಕರ್ನಾಟಕವೆಂದು ನಾಮಕರಣಏಕೀಕರಣ ಆದಮೇಲೂ ಪ್ರಾಚೀನ ಕಾಲದಿಂದಿದ್ದ ಕರ್ನಾಟಕ ಎಂಬ ಹೆಸರಿನ ಬದಲಾಗಿ ಮೈಸೂರು ರಾಜ್ಯವೆಂದು ಕರೆಯಲ್ಪಟ್ಟಿದ್ದು, ಹಲವರಿಗೆ ಬೇಸರ ಉಂಟುಮಾಡಿತು. ಇದೇ ಕಾರಣಕ್ಕೆ 1973 ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ಮುಖ್ಯಮಂತ್ರಿ ದೇವರಾಜ ಅರಸು ಕಾಲದಲ್ಲಿ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು. ಕರ್ನಾಟಕ ನಾಮಕರಣಕ್ಕೆ 50 ವರ್ಷಗಳು ತುಂಬುತ್ತಿರುವ ಸಂಭ್ರಮದ ಹಿನ್ನೆಲೆಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ತಹಸೀಲ್ದಾರ್ ಅನಿಲ್ ಮಾತನಾಡಿ, ಕನ್ನಡ ಜ್ಯೋತಿ ರಥಯಾತ್ರೆಯು ಇಂದಿನಿಂದ ನಗರ ಮತ್ತು ತಾಲ್ಲೂಕಿನಾದ್ಯಂತ ಸಂಚರಿಸಿ ನಂದಿಯಲ್ಲಿ ವಾಸ್ತವ್ಯ ಹೂಡಲಿದೆ. ನಾಳೆ ತಾಲೂಕಿನ ಹೊಸಹುಡ್ಯ ಗ್ರಾಮ ಪಂಚಾಯಿತಿಯಿಂದ ಶಿಡ್ಲಘಟ್ಟಕ್ಕೆ ಬೀಳ್ಕೊಡುಗೆ ಕೊಡಲಾಗುವುದು ಎಂದರು. ನಾಡಿನ ಮಹತ್ವ ಅರಿತುಕೊಳ್ಳಿತಾಪಂ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಮಾತನಾಡಿ, ವರ್ಷದ ಕನ್ನಡ ರಾಜ್ಯೋತ್ಸವ ದಿನಕ್ಕೆ ಕರ್ನಾಟಕ ರಾಜ್ಯವೆಂದು ನಾಮಕರಣ ಮಾಡಿ 50 ವರ್ಷ ಪೂರ್ಣ ಆಗುವುದರಿಂದ ಕನ್ನಡ ನಾಡು ನುಡಿಯ ಬಗ್ಗೆ ಇಂದಿನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಜೊತೆಗೆ ಸಂಭ್ರಮ ಆಚರಿಸಲು ಈ ರಥಯಾತ್ರೆ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಿದೆ. ಜೊತೆಗೆ ಕನ್ನಡ ನಾಡು ನುಡಿಯ ಮಹತ್ವವನ್ನು ಎಲ್ಲರಿಗೂ ತಿಳಿಸಿಕೊಡಬೇಕು ಎಂದರು. ಮೆರವಣಿಗೆಯಲ್ಲಿ ಕಲಾತಂಡ
ರಥಯಾತ್ರೆಯು ನಿಗದಿತ ಮಾರ್ಗದಲ್ಲಿ ಕಲಾತಂಡಗಳೊಂದಿಗೆ ತಾಲ್ಲೂಕಿನಾದ್ಯಂತ ಅದ್ದೂರಿಯಾಗಿ ಸಾಗಿತ್ತು. ಮಹಿಳೆಯರ ಪೋರ್ಣ ಕುಂಭ ಸ್ವಾಗತ, ಕಲಾತಂಡಗಳ ಕಲಾವಿದರ ಡೊಳ್ಳುಕುಣಿತ, ಶಾಲಾ ಮಕ್ಕಳ ಕೋಲಾಟ, ಬ್ಯಾಂಡ್ ವಾದನ, ಸಾರ್ವಜನಿಕರ ಗಮನ ಸೆಳೆದವು. ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ,ಕಸಾಪ ಗೌರವ ಕಾರ್ಯದರ್ಶಿ ಕೆ.ಎಂ.ರೆಡ್ಡಪ್ಪ,ಅರೂರು ಪಿಡಿಓ ಮದ್ದಿರೆಡ್ಡಿ, ಪರೇಸಂದ್ರ ಗ್ರಾ.ಪಂ.ಅಧ್ಯಕ್ಷೆ ಗಂಗರತ್ನಮ್ಮ,ಪಿಡಿಓ ವಿಜಯೇಂದ್ರ ಕುಮಾರ್,ಪಿಎಸ್ಐ ಜಗದೀಶ್ ರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು, ಸಾಹಿತಿಗಳು, ಕನ್ನಡ ಪ್ರೇಮಿಗಳು, ಕನ್ನಡ ಪರ ಸಂಘ ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಕಲಾತಂಡಗಳು, ಶಾಲಾ ಕಾಲೇಜುಗಳ ಮಕ್ಕಳು, ಸಾರ್ವಜನಿಕರು ಇದ್ದರು.