ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ತಿಪಟೂರು ಹೋರಾಟ ಸಮಿತಿ, ರೋಟರಿ ಸಂಸ್ಥೆ ವತಿಯಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಅಂಗವಾಗಿ ರಾಷ್ಟ್ರೀಯ ಹೆದ್ದಾರಿಯ ಈಡೇನಹಳ್ಳಿ ಗೇಟ್ ಸಮೀಪವಿರುವ ನಗರದ ಹಿಂದೂ ರುದ್ರಭೂಮಿಯನ್ನು ಸ್ವಚ್ಚಗೊಳಿಸುವ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು.ಈ ವೇಳೆ ಹೋರಾಟ ಸಮಿತಿ ಅಧ್ಯಕ್ಷ ಲೋಕೇಶ್ವರ ಮಾತನಾಡಿ, ನಮ್ಮ ಸಮಿತಿಯಿಂದ ಕಳೆದ ೧೩ವರ್ಷಗಳಿಂದಲೂ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳುತ್ತಾ ಬಂದಿದ್ದೇವೆ. ಈ ರುದ್ರಭೂಮಿ ಸುಮಾರು ೧೦ಎಕರೆಗೂ ಹೆಚ್ಚು ವಿಸ್ತಾರವಾಗಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲೆಂಬ ದೃಷ್ಟಿಯಿಂದ ಈ ಬಾರಿಯೂ ಇದೇ ಜಾಗದಲ್ಲಿ ಸ್ವಚ್ಚತೆ ಕೈಗೊಳ್ಳುವ ಮೂಲಕ ಬೆಳೆದಿದ್ದ ಗಿಡಗೆಂಟೆಗಳನ್ನು ಜೆಸಿಬಿ ಯಂತ್ರದ ತೆರವುಗೊಳಿಸಿ ರುದ್ರಭೂಮಿಯನ್ನು ಸ್ವಚ್ಚಗೊಳಿಸಲಾಗಿದೆ. ರುದ್ರಭೂಮಿ ಕಾಪಾಡಿಕೊಂಡು ಹೋಗುವುದು ಎಲ್ಲರ ಕರ್ತವ್ಯ, ನಾವು ಹಲವು ವರ್ಷಗಳಿಂದ ಸ್ವಚ್ಚತೆ ಮಾಡಿಕೊಂಡು ಬರುತ್ತಿರುವ ಕಾರಣ ರುದ್ರಭೂಮಿ ಅಚ್ಚುಕಟ್ಟಾಗಿದೆ. ಮಧ್ಯಮ, ಬಡ ವರ್ಗದ ಜನರು ಶವಗಳನ್ನು ಇಲ್ಲಿಗೆ ತಂದು ಮಣ್ಣು ಮಾಡುತ್ತಾರೆ. ಸ್ವಚ್ಚವಾಗಿದ್ದರೆ ಎಲ್ಲರಿಗೂ ಅನುಕೂಲ. ಆದ್ದರಿಂದ ಇಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನು ತೆರವುಗೊಳಿಸಿ ಸುಂದರವಾಗಿ ಕಾಣುವಂತೆ ಮಾಡಲಾಗಿದೆ. ಗಾಂಧೀಜಿಯವರು ಸ್ವಚ್ಚತೆಗೆ ಹೆಚ್ಚು ಒತ್ತು ನೀಡುತ್ತಿದ್ದರು ಹಾಗೆಯೇ ಪ್ರತಿಯೊಬ್ಬರೂ ಸ್ವಚ್ಚತೆ ಕಡೆಗೆ ಗಮನಹರಿಸಬೇಕು ಎಂದರು.
ರೋಟರಿ ಸಂಸ್ಥೆ ಅಧ್ಯಕ್ಷ ಗವಿಯಣ್ಣ, ಅಶೋಕ್‌ಕುಮಾರ್, ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗುರುಸ್ವಾಮಿ, ನಗರಸಭೆ ಸದಸ್ಯರಾದ ಸೊಪ್ಪುಗಣೇಶ್, ಭಾರತಿ ಮಂಜುನಾಥ್, ಮುಖಂಡ ಡಾಬಾ ಶಿವಶಂಕರ್ ಸೇರಿದಂತೆ ಗಾಂಧಿನಗರ, ಮಾವಿನತೋಪು, ಹಳೇಪಾಳ್ಯ, ನೆಹರು ನಗರದ ಯುವಕರ ಬಳಗದವರು,ಸೇರಿದಂತೆ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು, ನಗರದ ನಾಗರೀಕರು ೨೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಂತರ ನಿವೃತ್ತ ಶಿಕ್ಷಕ ಶ್ಯಾಮ್‌ಸುಂದರ್‌ರಿಂದ ಉಪನ್ಯಾಸ ನಡೆಯಿತು.