ಸಾರಾಂಶ
ಮೈದೊಳಲಿನ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಮೊಹರಂ ಮೆರವಣಿಗೆ ಮೇಲೆ ಗ್ರಾಮಸ್ಥರು ಮೆಣ್ಣಸು ಮಂಡಕ್ಕಿ ಎರಚಿ ಹರಕೆ ತೀರಿಸಿದರು.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು ಸಮೀಪದ ಮೈದೊಳಲಿನಲ್ಲಿ ಎರಡು ದಿನಗಳ ಕಾಲ ಗ್ರಾಮಸ್ಥರೆಲ್ಲರು ಸೇರಿ ಶ್ರದ್ಧಾಭಕ್ತಿಯಿಂದ ಮೊಹರಂ ಹಬ್ಬವನ್ನು ಆಚರಿಸಿದರು.
ಮಂಗಳವಾರ ಸಂಜೆ ಗ್ರಾಮದ ರಾಜಭಕ್ಷವಾಲಿ ಸುನ್ನಿ ಮಕಾನ್ ದೇವಸ್ಥಾನದ ಮುಂಭಾಗ ತೆಗೆದಿದ ಗುಂಡಿಯಲ್ಲಿ ಕಟ್ಟಿಗೆ ತುಂಡುಗಳನ್ನು ಹಾಕಿ, ಅಲ್ಲಾನಿಗೆ ಸಕ್ಕರೆ, ಚೊಂಗೆ ಸೇರಿದಂತೆ ವಿವಿಧ ಸಿಹಿ ಖಾಧ್ಯಗಳನ್ನು ನೈವೆದ್ಯವಾಗಿ ಅರ್ಪಿಸಿದ ಗ್ರಾಮಸ್ಥರು ಹರಕೆ ಕಾಣಿಕೆಗಳನ್ನು ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಮಂಗಳವಾರ ತಡ ರಾತ್ರಿ ಕಟ್ಟಿಗೆಗೆ ಬೆಂಕಿ ನೀಡಿದ ಗ್ರಾಮಸ್ಥರು ಬೆಳಗಿನವರೆಗೂ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಬುಧವಾರ ನಸುಕಿನಲ್ಲಿ ಜಾತಿ ಬೇದ ಮರೆತು ಮಕ್ಕಳಾದಿಯಾಗಿ ಕೆಂಡಹಾಯ್ದು ಭಕ್ತಿ ಸಮರ್ಪಿಸಿದರು. ಕೆಂಡ ಹಾಯ್ದ ಬಳಿಕ ನಡೆದ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಪಂಜಾ ಹಾಗೂ ಪಲ್ಲಕಿ ಹೊತ್ತು ಸಾಗಿದರು.ಬುಧವಾರ ಸಂಜೆ ಗ್ರಾಮದ ಆಂಜನೇಯ ದೇವಸ್ಥಾನದ ಮುಂಭಾಗ ಇರಿಸಲಾಗಿದ ಮೆರವಣಿಗೆಯಲ್ಲಿ ಮಕ್ಕಳು ವಿವಿಧ ವೇಷ ತೊಟ್ಟು ರಂಜಿಸಿದರು. ಪೋಷಾಕು ತೊಟ್ಟವರಿಗೆ ಪ್ರಸಾದದ ರೂಪವಾಗಿ ಒಣ ಕೊಬ್ಬರಿಯನ್ನು ನೀಡಲಾಯಿತು. ಹರಕೆ ಹೊತ್ತವರು ಮೆಣಸಿಕಾಳು ಹಾಗೂ ಮಂಡಕ್ಕಿಯನ್ನು ಎರೆಚಿದರು. ಬುಧವಾರ ರಾತ್ರಿ ಗ್ರಾಮದ ಏಳುಹಳ್ಳದ ನಾಲೆಯಲ್ಲಿ ದೇವರನ್ನು ವಿಸರ್ಜಿಸಿದರು. ಮೊಹರಂ ಹಬ್ಬದ ವಿದಿಗಳನ್ನು ಗ್ರಾಮ ಸಮೀತಿ ಹಾಗೂ ಗ್ರಾಮಸ್ಥರು ಮುಂದೆ ನಿಂತು ಅಚ್ಚುಕಟ್ಟಾಗಿ ನೆರವೇರಿಸಿದರು.