ಸಾರಾಂಶ
ಮಾನವ ಬಂದುತ್ವ ವೇದಿಕೆ ಬಾಗಲಕೋಟೆ ಹಾಗೂ ಎಂ.ಎಸ್.ಈಟಿ ಫೌಂಡೇಶನ್ ಬಾಗಲಕೋಟೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ನೀಲಾನಗರ ತಾಂಡಾದಲ್ಲಿ ಮಕ್ಕಳಿಗೆ ಹಾಲು ಕುಡಿಸಿ ನಾಗರ ಪಂಚಮಿಯ ದಿನವನ್ನು ಬಸವ ಪಂಚಮಿಯನ್ನಾಗಿ ಆಚರಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಾನವ ಬಂದುತ್ವ ವೇದಿಕೆ ಬಾಗಲಕೋಟೆ ಹಾಗೂ ಎಂ.ಎಸ್.ಈಟಿ ಫೌಂಡೇಶನ್ ಬಾಗಲಕೋಟೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ನೀಲಾನಗರ ತಾಂಡಾದಲ್ಲಿ ಮಕ್ಕಳಿಗೆ ಹಾಲು ಕುಡಿಸಿ ನಾಗರ ಪಂಚಮಿಯ ದಿನವನ್ನು ಬಸವ ಪಂಚಮಿಯನ್ನಾಗಿ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಶಿರೂರಿನ ವಿಜಯ ಮಹಾಂತೇಶ ತೀರ್ಥ ಮಠದ ಡಾ.ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ತತ್ವ ಆದರ್ಶಗಳಂತೆ ಎಲ್ಲ ಜನರು ಹಾಗೂ ಮಕ್ಕಳು ಮೂಢನಂಬಿಕೆಯಿಂದ ಹೊರಬಂದು ಮೌಢ್ಯ ಆಚರಣೆಗಳನ್ನು ವಿರೋಧಿಸಬೇಕು ಎಂದು ಹೇಳಿದರು.
ನೀಲಾನಗರದ ಶ್ರೀ ಕುಮಾರ್ ಮಹಾರಾಜರು ಮಾತನಾಡಿ, ಸತೀಶ ಜಾರಕಿಹೊಳಿಯವರು ಹಲವಾರು ವರ್ಷಗಳಿಂದ ಮೂಢನಂಬಿಕೆ ವಿರೋಧಿ ಕಾರ್ಯಕ್ರಮಗಳನ್ನು ವಿಭಿನ್ನವಾಗಿ ಆಚರಣೆ ಮಾಡುತ್ತಾ ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಆಗುತ್ತಿರುವ ಶೋಷಣೆಗಳ ವಿರುದ್ಧ ಹೋರಾಡುತ್ತಿದ್ದಾರೆ. ಇವರ ಕೈ ಬಲಪಡಿಸಲು ನಾವೆಲ್ಲರೂ ಪಣ ತೊಡಬೇಕೆಂದು ಹೇಳಿದರು.ರಕ್ಷಿತಾ ಭರತಕುಮಾರ ಈಟಿ ಮಾತನಾಡಿ, ಸಚಿವರಾದ ಸತೀಶ ಜಾರಕಿಹೊಳಿ ಇವರ ಮಾನವ ಬಂಧುತ್ವ ವೇದಿಕೆಯ ಸಮಾಜದಲ್ಲಿ ದೇವರ ಹೆಸರಿನಲ್ಲಿ ಶ್ರೀಸಾಮಾನ್ಯರನ್ನು ಹಾಗೂ ಬಡವರನ್ನು ಶೋಷಣೆ ಮಾಡುವುದರ ವಿರುದ್ಧ ಸತತವಾಗಿ ಹೋರಾಟ ಮಾಡುತ್ತಾ ಬಂದಿರುತ್ತಾರೆ. ಈ ಸಂಘಟನೆಯೊಂದಿಗೆ ಎಂ.ಎಸ್.ಈಟಿ ಫೌಂಡೇಶನ್ ಸದಾಕಾಲ ಜೊತೆಯಾಗಿ ಇರುತ್ತದೆ. ಮುಂದೆಯೂ ಮಾನವ ಬಂಧುತ್ವ ವೇದಿಕೆ ಮೂಢನಂಬಿಕೆ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾ ಇರುತ್ತದೆ ಎಂದು ತಿಳಿಸಿದರು.
ನೂರಾರು ವಿದ್ಯಾರ್ಥಿಗಳಿಗೆ ಹಾಲು ಮತ್ತು ಬಿಸ್ಕೆಟ್ ಅನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ತಾಲೂಕು ಸಂಚಾಲಕ ಜಯರಾಜ ಹಾದಿಕರ, ವಕೀಲರಾದ ರಾಜು ಲಮಾಣಿ, ರೇಣುಕಾ ನ್ಯಾಮಗೌಡ,ವಿಂದ್ಯಾ ಸರದೇಸಾಯಿ, ಕಲಾವತಿ ಕಮತ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶಂಕರ ಕಟ್ಟಿಮನಿ, ರಮೇಶ ಪೂಜಾರ, ಸಂತೋಷ ಕುರಿಗಾರ ಹಾಗೂ ಮಹೇಶ ಗದ್ದನಕೆರಿ, ಮಲ್ಲು ಲಮಾಣಿ, ಸುಭಾಷ್ ಲಮಾಣಿ, ಕುಮಾರ ಲಮಾಣಿ, ಸಿದ್ದಪ್ಪ ಗಾಳಿ ಉಪಸ್ಥಿತರಿದ್ದರು.