ಮಗುವಿಗೆ ತಾಯಿ ಹಾಲು ಜೀವಾಮೃತ

| Published : Aug 09 2024, 12:47 AM IST

ಸಾರಾಂಶ

ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತಾಯಿಯ ಎದೆಹಾಲು ಸಹಕಾರಿ

ಡಂಬಳ:

ಮಗುವಿಗೆ ತಾಯಿ ಹಾಲು ಜೀವಾಮೃತಕ್ಕೆ ಸಮಾನ, ತಾಯಿ ಎದೆಹಾಲು ಉಣಿಸುವ ಸಮಯದ ಈ ಬಾಂಧವ್ಯ ಮಗುವಿನ ಜೀವನ ಪೂರ್ತಿ ಸಂಬಂಧ ಕಾಪಾಡುವಲ್ಲಿ ಪೂರಕ ವಾತಾವರಣ ನಿರ್ಮಾಣ ಮಾಡುತ್ತದೆ ಎಂದು ಆರೋಗ್ಯ ಇಲಾಖೆಯ ಸಹಾಯಕಿ ಎಸ್.ಎನ್. ಹೊಸಪೇಟಿ ಹೇಳಿದರು.

ಡಂಬಳ ಹೋಬಳಿಯ ಕದಾಂಪುರ ಗ್ರಾಮದ ಡಾ. ಬಿ.ಆರ್.ಅಂಬೇಡ್ಕರ ನಗರದ ಅಂಗನವಾಡಿ ಕೇಂದ್ರ ಕೇಂದ್ರ ಸಂಖ್ಯೆ 132ರಲ್ಲಿ ಸ್ಥನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಿಸಿದ ತಕ್ಷಣ ಉತ್ಪತ್ತಿಯಾಗುವ ಕೊಲಸ್ಟ್ರಮ್‌ ಮಗುವಿಗೆ ಜೀವನ ಪೂರ್ತಿ ಆಂತರಿಕ ರೋಗನಿರೋಧಕ ಶಕ್ತಿ ವೃದ್ಧಿಸಬಲ್ಲ ಪ್ರತಿಕಾಯ ಒದಗಿಸುತ್ತದೆ ಎಂದರು.

ಅಂಗನವಾಡಿ ಕಾರ್ಯಕರ್ತೆ ಸುಮಂಗಲಾ ಗದಗ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತಾಯಿಯ ಎದೆಹಾಲು ಸಹಕಾರಿ. ಇದರಿಂದ ರೋಗ ನಿರೋಧಕ ಶಕ್ತಿ ಮಗುವಿನಲ್ಲಿ ಹೆಚ್ಚಳವಾಗಲಿದೆ. ಎದೆಹಾಲಿನಲ್ಲಿ ಮಗುವಿನ ಬೆಳವಣೆಗೆಗೆ ಬೇಕಾದ ಪೌಷ್ಟಿಕತೆ ಖನಿಜಾಂಶ ಮತ್ತು ಹೇರಳವಾದ ನೀರಿನ ಅಂಶಗಳು ಅಡಕವಾಗಿವೆ. ಸ್ತನ್ಯಪಾನದಿಂದ ಶಿಶು ಮರಣ ತಪ್ಪಿಸಲು ಸಾಧ್ಯವಾಗುತ್ತದೆ. ತಾಯಿಯ ಎದೆ ಹಾಲಿನಷ್ಟು ಪೋಷಕಾಂಶ ಭರಿತ ಆಹಾರ ಭೂಮಿಯ ಮೇಲೆ ಬೇರೆ ಇಲ್ಲ ಎಂದರು.

ಈ ಸಂದರ್ಭದಲ್ಲಿ ಎಸ್.ಡಿ. ಪೂಜಾರ, ಆರ್.ಟಿ. ಪೂಜಾರ, ಶಾರದ ಪಾಟೀಲ ಸೇರಿದಂತೆ ಹಲವು ತಾಯಿಂದಿರು ಇದ್ದರು.