ಸಾರಾಂಶ
ಅಂಕೋಲಾ: ಶಿರೂರಿನಲ್ಲಿ ಇತ್ತೀಚೆಗೆ ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ೮ ಜನರು ಮೃತಪಟ್ಟಿದ್ದು, ಮೂವರು ಕಣ್ಮರೆಯಾಗಿದ್ದಾರೆ. ಹಾಗೇ ಉಳುವರೆಯ ೬ ಮನೆಗಳು ಸಂಪೂರ್ಣವಾಗಿ ನೆಲಸಮವಾದರೆ, ಇನ್ನು ೪೦ಕ್ಕೂ ಅಧಿಕ ಮನೆ ಹಾನಿಗೊಳಗಾಗಿ ಜನರು ಕಾಳಜಿ ಕೇಂದ್ರದಲ್ಲಿ ವಾಸವಾಗಿದ್ದಾರೆ. ಇವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ನಿರಾಶ್ರಿತರ ಜತೆಗೂಡಿ ಬುಧವಾರ ಪ್ರಣವಾನಂದ ಸ್ವಾಮೀಜಿಯವರು ದೆಹಲಿಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಕೂಡ ಭೇಟಿ ಮಾಡಿ ಪ್ರತಿ ಕುಟುಂಬಕ್ಕೂ ಐಆರ್‌ಬಿ ಕಂಪನಿಯಿಂದ ಒಂದು ಕೋಟಿ ರುಪಾಯಿ ಹಣ ಪರಿಹಾರ ಕೊಡಿಸಬೇಕು. ಹಾಗೇ ಕಂಪನಿಯಲ್ಲಿ ಪ್ರತಿ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗವನ್ನು ಕೊಡಿಸಬೇಕು. ಹಾಗೇ ಮನೆ ಕಳೆದುಕೊಂಡವರಿಗೆ ₹೧೦ ಲಕ್ಷ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಶ್ರೀಗಳು ಕೋರಿದರು.ಐಆರ್‌ಬಿ ಕಂಪನಿ ನಡೆಸಿದ ಅವೈಜ್ಞಾನಿಕ ಕಾಮಗಾರಿಯ ಸಂಪೂರ್ಣ ಮಾಹಿತಿಯನ್ನು ಸಂಸದರಿಗೆ ನೀಡಿದರು. ಎನ್‌ಎಚ್ಎಐ ಚೇರ್ಮನ್ ಮತ್ತು ಸಂಬಂಧಪಟ್ಟ ಮಂತ್ರಿಗಳು, ರಾಜ್ಯ ಮಂತ್ರಿಗಳು, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳನ್ನು ಭೇಟಿ ಮಾಡಿ ಅವೈಜ್ಞಾನಿಕ ಕಾಮಗಾರಿಯ ಸಂಪೂರ್ಣ ಮಾಹಿತಿ ನೀಡಿದರು.
ಐಆರ್‌ಬಿ ಕಂಪನಿಯ ಮೇಲೆ ಕುಟುಂಬದ ಸದಸ್ಯರ ಜತೆ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಕುಳಿತುಕೊಳ್ಳಲು ನಿರ್ಣಯಿಸಲಾಗಿದೆ ದರು.ಈ ಸಂದರ್ಭದಲ್ಲಿ ಕುಂಬಾರ ಗುಂಡಯ್ಯ ಸ್ವಾಮೀಜಿ, ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಜ್ಯ ಘಟಕದ ಅಧ್ಯಕ್ಷ ಸಚಿನ ನಾಯ್ಕ ಹೊನ್ನಾವರ, ಸಂತ್ರಸ್ತ ಕುಟುಂಬಸ್ಥರು ಉಪಸ್ಥಿತರಿದ್ದರು.