ವಿದ್ಯಾರ್ಥಿಗಳಿಗೆ ರಾಜಕೀಯ, ಆಡಳಿತದ ಅರಿವು ಅವಶ್ಯಕ: ಮನ್ನಾಪೂರ

| Published : Aug 09 2024, 12:47 AM IST

ಸಾರಾಂಶ

ದೇಶದ ಆಡಳಿತ ಪ್ರಕ್ರಿಯೆಯ ಪರಿಪೂರ್ಣ ಜ್ಞಾನ ಇಂದಿನ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ ಎಂದು ಮೂಡಲಗಿಯ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜಿ.ಎಸ್. ಮನ್ನಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ದೇಶದ ಆಡಳಿತ ಪ್ರಕ್ರಿಯೆಯ ಪರಿಪೂರ್ಣ ಜ್ಞಾನ ಇಂದಿನ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದ್ದು, ಭಾರತ ವಿಶ್ವದಲ್ಲೇ ಬಲಾಢ್ಯ ಸಂವಿಧಾನ ಅಡಿಯಲ್ಲಿ ರಾಜಕೀಯ, ಆಡಳಿತ ಚಟುವಟಿಕೆಗಳು ನಡೆಯುತ್ತಿದ್ದು, ಆಡಳಿತ ದೇಶದ ಸಮಗ್ರತೆಯ ಬೆಳವಣಿಗೆಯ ಮೇಲೆ ಪ್ರಭಾವ ಬೀರುವುದರಿಂದ, ಆಡಳಿತದ ಮಹತ್ವ, ರಾಜಕೀಯ ವಾಸ್ತವಿಕ ರೂಪುರೇಷೆಗಳನ್ನು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಮೂಡಲಗಿಯ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜಿ.ಎಸ್. ಮನ್ನಾಪೂರ ಹೇಳಿದರು.

ಪಟ್ಟಣದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಣುಕು ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜಕೀಯ ರಂಗದಲ್ಲಿ ಸುಶಿಕ್ಷಿತ ಯುವಕರು ಪಾಲ್ಗೊಂಡು ದೇಶದವನ್ನು ಡಾ.ಬಿ.ಆರ್. ಅಂಬೇಡ್ಕರ್‌ ಆಶಯದಂತೆ ಸುಭದ್ರಗೊಳಿಸುವುದು ಅಗತ್ಯವಾಗಿದೆ. ಈ ದೃಷ್ಟಿಯಲ್ಲಿ ನಮ್ಮ ದೇಶ ಮತ್ತು ರಾಜ್ಯದ ಚುನಾವಣೆ ಆಯೋಗಗಳು ಅನೇಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ರೂಪಿಸಿ ಆಯೋಜನೆ ಮಾಡಿ ಅರಿವು ಮೂಡಿಸುವುದು ಒಳ್ಳೆಯ ಚಿಂತನೆಯಾಗಿದೆ ಎಂದರು.

ವಿದ್ಯಾರ್ಥಿ ಆಕಾಶ ರಾವತ ಮಾತನಾಡಿ, ರಾಜಕೀಯ ರಂಗದಲ್ಲಿ ಇರುವ ಕಾನೂನು, ನಿಬಂಧನೆಗಳು ಮತ್ತು ನಾಯಕತ್ವದಲ್ಲಿನ ಜವಾಬ್ದಾರಿಗಳು ಹಾಗೂ ಆಡಳಿತದಲ್ಲಿ ನಡೆಯುವ ಚರ್ಚೆಗಳ ಮಹತ್ವ ಕುರಿತು ನಮ್ಮಂತಹ ಯುವಕರಿಗೆ ಇಂತಹ ಕಾರ್ಯಕ್ರಮಗಳು ಸ್ಫೂರ್ತಿ ನೀಡುತ್ತೇವೆ ಎಂದರು.

ವಿದ್ಯಾರ್ಥಿನಿ ರೇವತಿ ಮಾದರ ಮಾತನಾಡಿ, ರಾಜಕೀಯ ಆಡಳಿತ ನಡೆಸುವುದರಲ್ಲಿ ಆಡಳಿತ ಮತ್ತು ವಿರೋಧ ಪಕ್ಷದವರ ಪಾತ್ರ ಮತ್ತು ಅದರಲ್ಲಿ ಭಾಗವಹಿಸುವುದರಿಂದ ಜವಾಬ್ದಾರಿಯಿಂದ ಆಡಳಿತ ನಿಭಾಯಿಸುವ ರಾಜಕೀಯ ತಂತ್ರಗಳ ಅರಿವು ದೊರಕುತ್ತದೆ ಎಂದರು.

ಅಣುಕು ಯುವ ಸಂಸತ್ತಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ವಿವಿಧ ಖಾತೆಗಳ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ವಹಿಸಿಕೊಂಡು ಪ್ರಶ್ನೆ ಚರ್ಚೆ ಹಾಗೂ ಪ್ರಮಾಣ ವಚನ ಸ್ವೀಕಾರ ಚಟುವಟಿಕೆಗಳು ಜರುಗಿದವು.ಪ್ರಾಚಾರ್ಯ ಶಿವಾನಂದ ಸತ್ತಿಗೇರಿ, ಉಪನ್ಯಾಸಕ ಸಂಜೀವ ವಾಲಿ, ಸಂಗಮೇಶ ಕುಂಬಾರ, ಮಲ್ಲಪ್ಪ ಜಾಡರ, ಎಂ.ಬಿ. ಸಿದ್ನಾಳ, ರವಿ ಕಟಗೇರಿ, ಎಸ್.ಬಿ.ಬೆಳವಿ, ಎಂ.ಎಲ್. ಪೂಜೇರಿ, ಅಶ್ವೀನಿ ಬಡಿಗೇರ, ಜಿ.ಎಚ್. ಕಡಪಟ್ಟಿ ಇದ್ದರು.