ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ

| Published : Aug 09 2024, 12:47 AM IST

ಸಾರಾಂಶ

ವಿದ್ಯಾರ್ಥಿ ಜೀವನದಲ್ಲಿ ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ವಿದ್ಯಾರ್ಥಿ ಜೀವನದಲ್ಲಿ ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಗುರುವಾರ ಹಮ್ಮಿಕೊಂಡ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಎನ್‌ಸಿಸಿ, ಎನ್‌ಎಸ್‌ಎಸ್ ಮತ್ತು ರೆಡ್ ಕ್ರಾಸ್ ರೋವರ್ಸ್‌ ಹಾಗೂ ರೇಂಜರ್ಸ್‌ ಇತರೆ ಚಟುವಟಿಕೆಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ದೈಹಿಕ ಮತ್ತು ಮಾನಸಿಕವಾಗಿ ಸದೃಢವಾದ ಈ ವಯಸ್ಸಿನಲ್ಲಿ ಗುರುಗಳ ಮತ್ತು ಪಾಲಕರ ಸಲಹೆ ಪಡೆದು ಉನ್ನತ ವ್ಯಾಸಂಗದಲ್ಲಿ ಸಾಧನೆ ಫಲಿತಾಂಶ ಪಡೆದು ಸಂಸ್ಥೆಗೆ ಪಾಲಕರಿಗೆ ಮತ್ತು ದೇಶಕ್ಕೆ ಕೀರ್ತಿ ತರುವ ಹುದ್ದೆಯಲ್ಲಿ ತಾವು ಸೇವೆ ಸಲ್ಲಿಸುವಂತಾಗಬೇಕು ಎಂಬುವುದು ನಮ್ಮೆಲ್ಲರ ಆಶಯ. ರಾಜ್ಯ ದೇಶ ಮತ್ತು ವಿದೇಶಗಳಲ್ಲಿ ಉನ್ನತ ವ್ಯಾಸಂಗ ಓದುವವರಿಗೆ ವೀರಶೈವ ಲಿಂಗಾಯತ ನಿಗಮದಿಂದ ಆರ್ಥಿಕವಾಗಿ ಸಿಗುವಂತ ಸೌಲಭ್ಯಗಳನ್ನು ಪಡೆದು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕೆಂದು ತಿಳಿಸಿದರು.

ಕಾಲೇಜು ಸಮಿತಿ ಉಪಾಧ್ಯಕ್ಷ ವಿಜಯ ಗದ್ದನಕೇರಿ ಮಾತನಾಡಿ, ಎಲ್ಲ ವರ್ಗಗಳ ಫಲಿತಾಂಶ, ಕ್ರೀಡೆಯನ್ನು ಗಮನಿಸಿಕೊಂಡು ಸಮಯವನ್ನು ವ್ಯರ್ಥವಾಗಿ ಕಳೆಯದೇ ಮತ್ತೆ ಮರಳದ ವಿದ್ಯಾರ್ಥಿ ಜೀವನವನ್ನು ಸದ್ಭಳಕೆ ಮಾಡಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು. ದೇಶದ ತತ್ವ ಸಿದ್ದಾಂತಗಳ ತಿಳಿದು ಸಂಸ್ಕಾರವಂತರಾಗಿ ಶಿಕ್ಷಕರ ಸಹಕಾರ ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆದು ದೇಶ ಮುನ್ನಡೆಸುವ ಗುರಿ ಹೊಂದಬೇಕು ಎಂದರು.

ಕಾಲೇಜು ಪ್ರಾಚಾರ್ಯ ಡಾ.ಎಚ್.ಎಸ್.ಸುರೇಶ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಮಂಗನಂತಿರುವ ಮನಸ್ಸನ್ನು ಸ್ವಾಮಿ ವಿವೇಕಾನಂದರಂತೆ ಏಕಾಗ್ರತೆಯಲ್ಲಿ ಸಮಾಜಕ್ಕೆ ದೇಶಕ್ಕೆ ನಾವೆಲ್ಲ ಭದ್ರವಾದ ರಕ್ಷಣೆ ಒದಗಿಸಬೇಕು. ಉನ್ನತ ವ್ಯಾಸಂಗದಲ್ಲಿ ಯಶಸ್ಸು ಕಾಣುವ ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಡಾ. ಎಸ್.ಬಿ. ಮಟೋಳಿ, ಮುತ್ತಣ್ಣ ಕಲಗೋಡಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ದೇವು ಡಂಬಳ, ರಾಣಿ ತೋಪಲಕಟ್ಟಿ, ಸಾವಿತ್ರಿ ತಪೇಲಿ, ಭೀಮಪ್ಪ ಕೊಡಗಾನೂರ, ಹನಮಂತ ನಡುವಿನಮನಿ, ಎಸ್.ಜಿ. ಎಮ್ಮಿ, ರಾಜಶೇಖರ ಬ್ಯಾಳಿ, ಎ.ಜೆ. ಹುಚನೂರ ಉಪಸ್ಥಿತಿರಿದ್ದರು. ಕಾರ್ಯಕ್ರಮ ಮೊದಲು ವಿದ್ಯಾರ್ಥಿಗಳು ಹುಮ್ಮನಸ್ಸಿನಿಂದ ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ಶಾಸಕರ ಮೆರವಣಿಗೆ ನಡೆಯಿತು.

ಕ್ರೀಡಾ ಸಂಚಾಲಕರ ಬಿ.ವೈ.ಆಲೂರ ವರದಿ ವಾಚಿಸಿದರು. ಐಕ್ಯೂಎಸಿ ಘಟಕ ಸಂಚಾಲಕ ನಿಜೇಶಕುಮಾರ ಡಿ, ಸ್ವಾಗತಿಸಿದರು. ಹನಮವ್ವ ಕಳ್ಳಿ ಮತ್ತು ಸಂಗಡಿಗರು ಪ್ರಾರ್ಥಿಸಿ ನಾಡಗೀತೆ ಹಾಡಿದರು. ಶ್ರೀದೇವಿ ಕಡಿವಾಲ ವಂದಿಸಿದರು.