ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್-ಬಿಜೆಪಿ ಪಾಳಯದಲ್ಲಿ ಸಂಭ್ರಮ

| Published : Jun 05 2024, 12:30 AM IST

ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್-ಬಿಜೆಪಿ ಪಾಳಯದಲ್ಲಿ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪ್ರಚಂಡ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಪಾಳಯದಲ್ಲಿ ಸಂತಸ-ಸಂಭ್ರಮ ಮನೆ ಮಾಡಿದೆ. ಜೆಡಿಎಸ್ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ನೆಚ್ಚಿನ ನಾಯಕನ ಪರ ಜೈಕಾರ ಕೂಗಿದರು. ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರಮೋದಿ ಜೊತೆಗೆ ಕುಮಾರಸ್ವಾಮಿ ಅವರಿಗೆ ಜೈಕಾರ ಮೊಳಗಿಸಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪ್ರಚಂಡ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಪಾಳಯದಲ್ಲಿ ಸಂತಸ-ಸಂಭ್ರಮ ಮನೆ ಮಾಡಿದೆ. ಜೆಡಿಎಸ್ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ನೆಚ್ಚಿನ ನಾಯಕನ ಪರ ಜೈಕಾರ ಕೂಗಿದರು. ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರಮೋದಿ ಜೊತೆಗೆ ಕುಮಾರಸ್ವಾಮಿ ಅವರಿಗೆ ಜೈಕಾರ ಮೊಳಗಿಸಿ ಸಂಭ್ರಮಿಸಿದರು.

ಆರಂಭದಿಂದಲೂ ಎಚ್.ಡಿ.ಕುಮಾರಸ್ವಾಮಿ ಮುನ್ನಡೆಯನ್ನು ಕಾಯ್ದುಕೊಂಡು ಬಂದರು. ಪ್ರತಿಯೊಂದು ಸುತ್ತಿನಲ್ಲೂ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತಿದ್ದಂತೆ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನೆರೆದಿದ್ದ ಕೆಲವು ಜೆಡಿಎಸ್-ಬಿಜೆಪಿ ಮುಖಂಡರು-ಕಾರ್ಯಕರ್ತರು ಹರ್ಷೋದ್ಘಾರ ಮೊಳಗಿಸುತ್ತಿದ ದೃಶ್ಯಗಳು ಕಂಡುಬಂದವು.

ವಿಶ್ವ ವಿದ್ಯಾಲಯದ ಆವರಣದಲ್ಲಿ ಎಣಿಕೆ ಸಮಯದಲ್ಲಿ ಹಾಜರಿದ್ದ ಕಾಂಗ್ರೆಸ್ ಕಾರ್ಯಕರ್ತರು ಎರಡು-ಮೂರು ಸುತ್ತಿನ ಫಲಿತಾಂಶ ಗೊತ್ತಾಗುತ್ತಿದ್ದಂತೆಯೇ ಜಾಗ ಖಾಲಿ ಮಾಡಿದರು. ಅತಿ ಹೆಚ್ಚಿನ ಸಂಖ್ಯೆಯಲ್ಲೇನೂ ಕಾರ್ಯಕರ್ತರು ಮಂಡ್ಯ ವಿವಿ ಆವರಣದಲ್ಲಿ ನೆರೆದಿರಲಿಲ್ಲ. ಬಹುತೇಕ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಟಿವಿಗಳಲ್ಲೇ ಫಲಿತಾಂಶವನ್ನು ವೀಕ್ಷಿಸಿ ತಿಳಿದುಕೊಳ್ಳುತ್ತಿದ್ದರಿಂದ ಮಂಡ್ಯ ವಿವಿ ಆವರಣ ಜನರಿಲ್ಲದೆ ಭಣಗುಡುತ್ತಿತ್ತು.

ಚುನಾವಣೆಯಲ್ಲಿ ಎಚ್ಡಿಕೆ ಗೆಲುವು ಜೆಡಿಎಸ್ ಕಾರ್ಯಕರ್ತರ ಸಂಭ್ರಮ

ಪಾಂಡವಪುರ:ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಅಭೂತ ಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ತಾಲೂಕಿನ ದೇವೇಗೌಡನಕೊಪ್ಪಲು ಗೇಟ್ ಸಮೀಪದ ಬಳಿ ಉದ್ಯಮಿ ಶಿವಕುಮಾರ್ ನೇತೃತ್ವದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಗೆಲುವಿನ ಹಿನ್ನೆಲೆಯಲ್ಲಿ ಸಿಹಿ ಹಂಚಿದರು.ಉದ್ಯಮಿ ಶಿವಕುಮಾರ್ ಮಾತನಾಡಿ, ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ 2.84 ಲಕ್ಷಕ್ಕೂ ಅಧಿಕ ಮತ ನೀಡುವ ಮೂಲಕ ಜಿಲ್ಲೆಯ ಹಾಗೂ ಕೆ.ಆರ್.ನಗರದ ಜನರು ಗೆಲುವು ತಂದುಕೊಂಡಿದ್ದಾರೆ ಎಂದರು.

ಎಚ್.ಡಿ.ಕುಮಾರಸ್ವಾಮಿ ಅವರ ಗೆಲುವಿಗೆ ಪಕ್ಷಾತೀತವಾಗಿ ಎಲ್ಲರು ಸಹ ಸಹಕಾರ ನೀಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರ ಗೆಲುವಿಗೆ ಸಹಕರಿಸಿದ ಎಲ್ಲಾ ಕಾರ್‍ಯಕರ್ತರು, ಮುಖಂಡರಿಗೆ ಪಕ್ಷದ ಪರವಾಗಿ ಅಭಿನಂಧನೆಗಳನ್ನು ಅರ್ಪಿಸುತ್ತೇನೆ ಎಂದರು.ಕೇಂದ್ರದಲ್ಲಿ ಮೋದಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಎಲ್ಲಾ ಸನ್ನಿವೇಶಗಳಿದ್ದು ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೇಂದ್ರದ ಮಂತ್ರಿ ಮಾಡಬೇಕೆಂದು ಮನವಿ ಮಾಡಿದರು.

ಈ ವೇಳೆ ಸುಂಕಾತೊಣ್ಣೂರು ಗ್ರಾಪಂ ಮಾಜಿ ಅಧ್ಯಕ್ಷ ಜೆ.ದೇವೇಗೌಡ, ಉಪಾಧ್ಯಕ್ಷ ಹೇಮಂತ್ ಕುಮಾರ್, ಸದಸ್ಯರಾದ ಸುರೇಶ್, ತಿಮ್ಮೇಗೌಡ, ಸತೀಶ್(ಮೊಟ್ಟೆ), ಎಸ್.ಕೆ.ಉಮೇಶ್, ನಾರಾಯಣಸ್ವಾಮಿ, ರಾಮು, ಸೇರಿದಂತೆ ಹಲವು ಇದ್ದರು.