ಹಾಸನ ಜಿಲ್ಲೆಯಲ್ಲಿ ಸಂಭ್ರಮದ ಬಕ್ರೀದ್‌ ಹಬ್ಬ ಆಚರಣೆ

| Published : Jun 18 2024, 12:48 AM IST

ಸಾರಾಂಶ

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಕ್ರೀದ್ ಹಬ್ಬದ ಅಂಗವಾಗಿ ಸೋಮವಾರ ಹಾಸನದ ಹೊಸಲೈನ್‌ ರಸ್ತೆಯಲ್ಲಿರುವ ಹಳೆ ಈದ್ಗಾ ಮೈದಾನ ಮತ್ತು 80 ಅಡಿ ರಸ್ತೆಯಲ್ಲಿರುವ ಹೊಸ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಸಾಮೂಹಿಕವಾಗಿ ಅಲ್ಲಾನ ಸ್ಮರಿಸಿದ ಮುಸ್ಲಿಮರು । ಪ್ರವಾದಿ ಇಬ್ರಾಹಿಂರ ಬಲಿ ಪ್ರಸಂಗ ಸ್ಮರಣೆ । ಬಡವರಿಗೆ ಬಲಿ ಪ್ರಾಣಿಯ ಆಹಾರ

ಕನ್ನಡಪ್ರಭ ವಾರ್ತೆ ಹಾಸನ

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಕ್ರೀದ್ ಹಬ್ಬದ ಅಂಗವಾಗಿ ಸೋಮವಾರ ನಗರದ ಹೊಸಲೈನ್‌ ರಸ್ತೆಯಲ್ಲಿರುವ ಹಳೆ ಈದ್ಗಾ ಮೈದಾನ ಮತ್ತು 80 ಅಡಿ ರಸ್ತೆಯಲ್ಲಿರುವ ಹೊಸ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಹೊಸಲೈನ್ ರಸ್ತೆ ಬಳಿ ಇರುವ ಹಳೆ ಈದ್ಗಾ ಮೈದಾನದಲ್ಲಿ ಸರಿಯಾಗಿ ಬೆಳಿಗ್ಗೆ ೭.೩೦ಕ್ಕೆ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು. ಇದಾದ ಬಳಿಕ ಬೆಳಿಗ್ಗೆ ೯.೧೫ಕ್ಕೆ ನಗರದ 80 ಫೀಟ್ ರಸ್ತೆ ಬಳಿ ಇರುವ ಹೊಸ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಹಜರತ್ ಗುಜರಾತಿ ದರ್ಗಾ ಸಮಿತಿ ಹಾಗೂ ಈದ್ಗಾ ಕಮಿಟಿ ಅಧ್ಯಕ್ಷ ಸಮೀರ್ ಖಾನ್ ಮಾಧ್ಯಮದೊಂದಿಗೆ ಮಾತನಾಡಿ, ‘ಸಮಸ್ತ ನಾಗರಿಕ ಬಂಧುಗಳಿಗೆ ಬಕ್ರೀದ್ ಹಬ್ಬದ ಅಂಗವಾಗಿ ತುಂಬು ಹೃದಯದ ಶುಭಾಶಯಗಳನ್ನು ಹೇಳುತ್ತೇನೆ. ಬಕ್ರೀದ್ ಹಬ್ಬ ಎಂದರೆ ತ್ಯಾಗ ಬಲಿದಾನದ ಸಂಕೇತ. ಪ್ರವಾದಿ ಇಬ್ರಾಹಿಂರು ತನ್ನ ಸ್ವಂತ ಮಗ ಪ್ರವಾದಿ ಇಸ್ಮಾಯಿಲ್ ಅವರನ್ನು ಬಲಿ ಕೊಡುವ ಸಂದರ್ಭ ಒದಗಿ ಬರುತ್ತದೆ. ಇಬ್ರಾಹಿಂರನ್ನು ಪರೀಕ್ಷೆಗೆ ಒಳಪಡಿಸುವಂತಹ ಒಂದು ಸನ್ನಿವೇಶ. ಆ ಒಂದು ಪರೀಕ್ಷೆಯಲ್ಲಿ ಪ್ರವಾದಿ ಇಬ್ರಾಹಿಂರು ಉತ್ತೀರ್ಣರಾಗುತ್ತಾರೆ. ಆ ನೆನಪಿಗಾಗಿ ಪ್ರಾಣಿಯನ್ನು ಬಲಿ ಕೊಡುತ್ತೇವೆ’ ಎಂದು ಹೇಳಿದರು.

ಪ್ರಪಂಚದ ನಾನಾ ಮೂಲೆಗಳಿಂದ ಬಕ್ರಿದ್ ಹಬ್ಬದ ವೇಳೆ ಹಜ್‌ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಇಂದು ಮಳೆ ಇಲ್ಲದೆ ಜನರು ಬವಣೆ ಪಡುತ್ತಿದ್ದು, ಅದಕ್ಕಾಗಿ ಎಲ್ಲಾ ಮಸೀದಿಗಳಲ್ಲಿ ಮತ್ತು ಈದ್ಗಾ ಮೈದಾನದಲ್ಲಿ ಎಲ್ಲರೂ ಸೇರಿ ವಿಶೇಷ ಪ್ರಾರ್ಥನೆಯನ್ನು ಮಾಡಿದ್ದೇವೆ. ಬಲಿ ಕೊಡುವ ಪ್ರಾಣಿಯ ಮಾಂಸವನ್ನು ಎಲ್ಲಾ ಬಡ ಜನರಿಗೆ ಆಹಾರವಾಗಿ ಕೊಡುವುದು ಈ ಬಕ್ರೀದ್ ಹಬ್ಬದ ವೇಳೆ ನೆಡಯುತ್ತದೆ. ಈ ದೇಶದ ಪ್ರಗತಿ, ಸೌಹಾರ್ದತೆ, ಸಹೋದರತ್ವಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.