ಜೂ.9ರಂದು ಮೈಸೂರಿನಲ್ಲಿ ಸಂಭ್ರಮದ ಬಸವ ಜಯಂತಿ ಆಚರಣೆ

| Published : May 13 2024, 12:02 AM IST / Updated: May 13 2024, 12:03 AM IST

ಸಾರಾಂಶ

ಜೂ. 9ರಂದು ನಡೆಯುವ ಬಸವ ಜಯಂತಿ ಕಾರ್ಯಕ್ರಮಕ್ಕೆ ಆರ್ಥಿಕ ಸಹಕಾರ ನೀಡುವವರಿಂದ ನಗದು ಸ್ವೀಕಾರ ಮಾಡದೆ ಅವರ ಸಹಕಾರ ಮತ್ತು ಸಹಾಯವನ್ನು ನೇರವಾಗಿ ಜಯಂತಿ ಆಚರಣೆಯ ಖಾತೆಗೆ ಜಮಾ ಮಾಡಿಸಿಕೊಳ್ಳುತ್ತಿದ್ದು ಕಾರ್ಯಕ್ರಮ ಮುಗಿದ ಏಳು ದಿನಗಳ ಒಳಗೆ ಸಾರ್ವಜನಿಕವಾಗಿ ಲೆಕ್ಕಪತ್ರ ಮಂಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಜಿಲ್ಲಾ ಬಸವ ಬಳಗಳ ಆಶ್ರಯದಲ್ಲಿ ಜೂ. 9 ರಂದು ಭಾನುವಾರ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಅತ್ಯಂತ ವೈಭವದಿಂದ ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಿಸಲಾಗುತ್ತದೆ ಎಂದು ಬಸವ ಬಳಗದ ಅಧ್ಯಕ್ಷ ಪ್ರದೀಪ್‌ ಕುಮಾರ್ ಹೇಳಿದರು.

ಪಟ್ಟಣದ ಹೊರ ವಲಯದಲ್ಲಿನ ಅರಕೆರೆ ವಿರಕ್ತ ಮಠದಲ್ಲಿ ನಡೆದ ಜಿಲ್ಲಾ ಬಸವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಐತಿಹಾಸಿಕ ಕಾರ್ಯಕ್ರಮಕ್ಕೆ 50 ಸಾವಿರ ಬಸವ ಭಕ್ತರನ್ನು ಸೇರಿಸಲು ನಿರ್ಧರಿಸಿದ್ದು ಇದಕ್ಕಾಗಿ ಎಲ್ಲಾ ಸಿದ್ಧತಾ ಕಾರ್ಯಗಳು ಭರದಿಂದ ನಡೆಯುತ್ತಿವೆ ಎಂದರು.

ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪೂರ್ವಸಿದ್ಧತೆಗಾಗಿಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ವೀರಶೈವ ಸಮಾಜದ ಮುಖಂಡರು ಮತ್ತು ಪ್ರಮುಖರ ಸಭೆ ನಡೆಸಿ ಅವರ ಸಲಹೆ ಮತ್ತು ಸೂಚನೆ ಪಡೆದು ಯಶಸ್ವಿಯಾಗಿ ಕಾರ್ಯಕ್ರಮ ನಡೆಸಲು ಕ್ರಮ ಕೈಗೊಂಡಿದ್ದು ನಮಗೆ ಸರ್ವ ಜನಾಂಗದವರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಬಸವ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕೆ ತಕ್ಕಂತೆ ವಾಹನದ ವ್ಯವಸ್ಥೆ ಮಾಡಲು ಸಮಿತಿ ತೀರ್ಮಾನಿಸಿದ್ದು, ಅದರಂತೆ ಕೆ.ಆರ್. ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕುಗಳಿಗೆ 50 ಬಸ್ಸುಗಳ ವ್ಯವಸ್ಥೆ ಮಾಡಿದ್ದು ಅಗತ್ಯ ಬಿದ್ದರೆ ಮತ್ತಷ್ಟು ವಾಹನ ಕಳುಹಿಸುವುದಾಗಿ ಪ್ರಕಟಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಕೆ. ಸ್ವಾಮಿ ಮಾತನಾಡಿ, ಜೂ. 9ರಂದು ನಡೆಯುವ ಬಸವ ಜಯಂತಿ ಕಾರ್ಯಕ್ರಮಕ್ಕೆ ಆರ್ಥಿಕ ಸಹಕಾರ ನೀಡುವವರಿಂದ ನಗದು ಸ್ವೀಕಾರ ಮಾಡದೆ ಅವರ ಸಹಕಾರ ಮತ್ತು ಸಹಾಯವನ್ನು ನೇರವಾಗಿ ಜಯಂತಿ ಆಚರಣೆಯ ಖಾತೆಗೆ ಜಮಾ ಮಾಡಿಸಿಕೊಳ್ಳುತ್ತಿದ್ದು ಕಾರ್ಯಕ್ರಮ ಮುಗಿದ ಏಳು ದಿನಗಳ ಒಳಗೆ ಸಾರ್ವಜನಿಕವಾಗಿ ಲೆಕ್ಕಪತ್ರ ಮಂಡಿಸುವುದಾಗಿ ಮಾಹಿತಿ ನೀಡಿದರು.

ಪಶುಪತಿ ಗ್ರಾಪಂ ಅಧ್ಯಕ್ಷ ಜಗದೀಶ್ ಮಾತನಾಡಿ, ನಮ್ಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಂದ ಕಾರ್ಯಕ್ರಮಗಳಿಗೆ ಬರುವ ಬಸವ ಭಕ್ತರಿಗೆ ನಾನು ವಾಹನದ ವ್ಯವಸ್ಥೆ ಮಾಡಲಿದ್ದು ಇದರೊಂದಿಗೆ ಬಳಗ ಹೇಳುವ ಎಲ್ಲಾ ಸಹಕಾರ ಮತ್ತು ಸಹಾಯವನ್ನು ಮಾಡಲು ಸಿದ್ಧನಿದ್ದೇನೆ ಎಂದು ಅವರು ಹೇಳಿದರು.

ಅರಕೆರೆ ವಿರಕ್ತ ಮಠದ ಸಿದ್ದೇಶ್ವರಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕೆಂಪರಾಜು, ಕೆಪಿಸಿಸಿ ಸಂಯೋಜಕ ಎಲ್.ಪಿ. ಧರ್ಮ ಮಂಜುನಾಥ್, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ. ರವಿಕುಮಾರ್, ವೀರಶೈವ ಮುಖಂಡರಾದ ಸರಗೂರು ನಟರಾಜು, ದ್ರಾಕ್ಷಾಯಿಣಿ, ಉಮಾ ಶಂಕರ್, ಪ್ರತಾಪ್, ಚಂದ್ರಶೇಖರ್, ನಾಗೇಶ್, ಮಹೇಶ್, ಗಂಗಾಧರ್, ಮನೋಹರಿ, ರಾಜಶೇಖರ್, ಸಣ್ಣಲಿಂಗಪ್ಪ, ಪ್ರದೀಪ್, ಮಾರ್ಕಂಡಯ್ಯ ಸ್ವಾಮಿ ಮೊದಲಾದವರು ಇದ್ದರು.