ಶನಿವಾರಸಂತೆಯಲ್ಲಿ ಬಸವ ಪಂಚಮಿ ಆಚರಣೆ

| Published : Aug 11 2024, 01:30 AM IST

ಸಾರಾಂಶ

ಶನಿವಾರಸಂತೆ ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಬಸವ ಪಂಚಮಿ ಆಚರಿಸಲಾಯಿತು. ಸಂಘಟನೆಯ ಪ್ರಮುಖರು, ನಿಲಯ ವಿದ್ಯಾರ್ಥಿಗಳು ಪುಷ್ಪ ನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲಾ ಮಾನವ ಬಂಧುತ್ವ ವೇದಿಕೆ ಮತ್ತು ಮಹಾಮೈತ್ರಿ ಬೌದ್ಧ ವಿಹಾರ ಟ್ರಸ್ಟ್‌ ಸಂಯುಕ್ತಾಶ್ರಯದಲ್ಲಿ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ಪರಿಕಲ್ಪನೆಯಂತೆ ಬಸವ ಪಂಚಮಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರು ಹಾಗೂ ನಿಲಯದ ವಿದ್ಯಾರ್ಥಿಗಳು ಬುದ್ಧ, ಬಸವ, ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ನಂತರ ಮಾತನಾಡಿದ ಮಾನವ ಬಂಧುತ್ವ ವೇದಿಕೆ ಜಿಲ್ಲಾಧ್ಯಕ್ಷ ಜೆ.ಎಲ್.ಜನಾರ್ಧನ್, ಬಸವಣ್ಣನವರ ವೈಚಾರಿಕ ದೃಷ್ಟಿಕೋನದಲ್ಲಿ ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ಪರಿಕಲ್ಪನೆಯಂತೆ ನಾಗರಪಂಚಮಿಯಲ್ಲಿ ಹುತ್ತಕ್ಕೆ ಹಾಲು ಎರೆದು ವ್ಯರ್ಥ ಮಾಡುವ ಬದಲು ಹಸಿದ ಮಕ್ಕಳಿಗೆ ಹಾಲುಣಿಸುವ ಬಸವ ತತ್ವ ಪರಿಪಾಲನೆಗೆ ಇಡೀ ರಾಜ್ಯ ಮಾದರಿಯಾಯಿತು ಎಂದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಜೆ.ಆರ್.ಪಾಲಾಕ್ಷ ಮಾತನಾಡಿ, ವಿದ್ಯಾರ್ಥಿಗಳು ಮೌಡ್ಯಾಚಾರಣೆಗಳಿಂದ ದೂರ ಉಳಿದು ಉನ್ನತ ಮಟ್ಟದ ಶಿಕ್ಷಣ ಪಡೆಯಬೇಕು ಮತ್ತು ವೈಚಾರಿಕತೆಯ ಪ್ರಜ್ಞೆ ಮೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಾಲಕಿಯರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಜಲಜಾಕ್ಷಿ, ದುಂಡಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸಿ.ಬಿ.ಅಬ್ಬಾಸ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ತಾಲೂಕು ಅಧ್ಯಕ್ಷ ಶಿವಾನಂದ, ಹಂಡ್ಲಿ ಸೊಸೈಟಿ ಸೋಮಣ್ಣ, ಉದ್ಯಮಿ ಸಂತೋಷ್, ಆರೋಗ್ಯ ಇಲಾಖೆಯ ನವೀನ್, ದಲಿತ ಮುಖಂಡ ಮಂಜು, ರಾಮ ನಾಯಕ್ ವಿದ್ಯಾರ್ಥಿ ನಿಲಯ ಸಿಬ್ಬಂದಿ, ಅಡುಗೆ ಸಹಾಯಕರು ಉಪಸ್ಥಿತರಿದ್ದರು.

ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಹಾಲು ವಿತರಿಸಲಾಯಿತು. ದೊಡ್ಡ ಕುಂದೂರು ಶಾಲೆ ಶಿಕ್ಷಕ ಶಿವಣ್ಣ ವಿದ್ಯಾರ್ಥಿಗಳಿಗೆ ಹಾಡಿನ ಮೂಲಕ ಅರಿವು ನೀಡಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹಾಗೂ ಮಾನವ ಬಂಧುತ್ವ ವೇದಿಕೆ ಸೋಮವಾರಪೇಟೆ ತಾಲೂಕು ಸಂಚಾಲಕ ಎಂ.ಎಸ್.ವೀರೇಂದ್ರ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.