ಚರಗದ ಸಂಭ್ರಮ, ಭೂತಾಯಿಗೆ ನಮನ

| Published : Dec 31 2024, 01:02 AM IST

ಸಾರಾಂಶ

ಎಳ್ಳಅಮಾವಾಸ್ಯೆ ನಿಮಿತ್ತ ಭೂಮಿ ತಾಯಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚರಗ ಚೆಲ್ಲುವ ಹಬ್ಬವನ್ನು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಎಳ್ಳಅಮಾವಾಸ್ಯೆ ನಿಮಿತ್ತ ಭೂಮಿ ತಾಯಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚರಗ ಚೆಲ್ಲುವ ಹಬ್ಬವನ್ನು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ಕೇಸೂರು, ಮುದೇನೂರು, ತಾವರಗೇರಾ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ರೈತರು ಹಬ್ಬದ ಅಂಗವಾಗಿ ಕುಟುಂಬ ಸಮೇತರಾಗಿ ಎತ್ತಿನಗಾಡಿಯಲ್ಲಿ, ಟ್ರ್ಯಾಕ್ಟರ್‌ಗಳಲ್ಲಿ, ವಿವಿಧ ವಾಹನಗಳ ಮೂಲಕ ವಿಶೇಷ ತಿಂಡಿ, ತಿನಿಸುಗಳೊಂದಿಗೆ ತಮ್ಮ ಜಮೀನುಗಳಿಗೆ ತೆರಳಿ ಹೊಲಗಳಲ್ಲಿ ಪಾಂಡವರನ್ನು ಪ್ರತಿಷ್ಠಾಪಿಸಿ, ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಬಳಿಕ ಜಮೀನು ತುಂಬೆಲ್ಲಾ ಸುತ್ತಾಡಿ ತಮ್ಮ ಜಮೀನಿನ ಸುತ್ತ ಹೋಳಿಗೆ ಹಾಗೂ ಅನ್ನ ಮಿಶ್ರಿತ ಆಹಾರವನ್ನು ಭೂತಾಯಿಗೆ ನೈವೇದ್ಯ ಅರ್ಪಣೆ ಮಾಡುವ ಮೂಲಕ ಚರಗ ಚೆಲ್ಲುವ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ನಮಿಸಿ, ಫಸಲು ಚೆನ್ನಾಗಿ ಬರಬೇಕು ಎಂದು ಪ್ರಾರ್ಥನೆ ಸಲ್ಲಿಸಿದರು.

ಎತ್ತುಗಳಿಗೆ ಶೃಂಗಾರ:

ರೈತರು ಎತ್ತುಗಳಿಗೆ ವಿಶೇಷವಾಗಿ ಶೃಂಗಾರ ಮಾಡುವ ಮೂಲಕ ಅವುಗಳಿಗೆ ಝೂಲ, ಕೋಡಣಸು, ಗೊಂಡೆ, ಹಣೆಕಟ್ಟುಗಳಿಂದ ಶೃಂಗರಿಸಿದ್ದರು. ವಿಶೇಷ ಭೋಜನ:

ರೈತಾಪಿ ಜನರು ವಿಶೇಷ ಅಡುಗೆ ಮಾಡಿಕೊಂಡು ಜಮೀನುಗಳಿಗೆ ಚರಗ ಚೆಲ್ಲಲು ಹೋಗಿ ಸಜ್ಜಿ ರೊಟ್ಟಿ, ಪುಂಡಿಪಲ್ಯ, ಜೋಳದ ರೊಟ್ಟಿ, ಬದನೆಕಾಯಿ ಪಲ್ಯ, ಖಡಕ್ ರೊಟ್ಟಿ, ವಿವಿಧ ಬಗೆಯ ಪಲ್ಲೆಗಳು, ಶೇಂಗಾ, ಗುರೆಳ್ಳು, ಪುಠಾಣಿ ಚಟ್ನಿ, ಕಡಬು, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಕರಿಗಡಬು, ಬಜ್ಜಿ, ಸಂಡಿಗೆ ಹಪ್ಪಳ ಸೇರಿದಂತೆ ವಿವಿಧ ಭೋಜನ ಸವಿಯುವ ಮೂಲಕ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಿದರು.