ಸಾರಾಂಶ
ಶಿರಸಿ: ಹಿಂದೂಗಳ ಸಾಂಪ್ರದಾಯಿಕ ಹಬ್ಬವಾದ ಬೆಳಕಿನ ಹಬ್ಬ ಎಂದು ಕರೆಯಲ್ಪಡುವ ದೀಪಾವಳಿ ಹಬ್ಬವನ್ನು ನಗರ ಸೇರಿದಂತೆ ತಾಲೂಕಿನಾದ್ಯಂತ ಸಡಗರ- ಸಂಭ್ರಮದಿಂದ ಆಚರಿಸಿದರು.ದೀಪಾವಳಿಯ ಬೆಳಗ್ಗೆ ಕೃಷಿಕರು ಯಾವುದೇ ಆಹಾರ ಸೇವಿಸದೆ, ಹಿಂದಿನ ದಿನ ತಯಾರಿಸಿಟ್ಟ ಅಡಕೆ ಹಾರ, ಪುಂಡಿ ನಾರಿನ ದಾಬುಗಳ ಜತೆಗೆ ತೆಂಗಿನಕಾಯಿ, ಸಿಂಗಾರ, ಪಚ್ಚೆತೆನೆ, ಹಾಲು, ಆಗಷ್ಟೇ ಕಾಯಿಸಿ ಮಾಡಿದ ತುಪ್ಪ, ಪೂಜಾ ಪರಿಕರಗಳ ಜತೆ ಬರಿಗಾಲಲ್ಲಿ ಹುಲಿಯಪ್ಪನ ಸನ್ನಿಧಿಗೆ ತೆರಳಿದರು.
ಊರಿನ ಬಹುತೇಕ ಪುರುಷರು ಏಕಕಾಲದಲ್ಲಿ ಜತೆಗೂಡಿ ಹುಲಿಯಪ್ಪನ ಸನ್ನಿಧಾನಕ್ಕೆ ಆಗಮಿಸಿ ಅಲ್ಲಿ ಫಲಪುಷ್ಪ ಪೂಜೆ, ಧೂಪ ಪೂಜೆ, ಮಂತ್ರ ಪೂಜೆಯ ಜತೆ ಜಾಗಟೆ ಪೂಜೆಯನ್ನು ನೆರವೇರಿಸಿದರು. ಭಕ್ತಿಯ ಪೂಜೆ ನೋಡಲು ಬಂದಿದ್ದ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನೂರಾರು ಗ್ರಾಮಸ್ಥರು ತಮ್ಮ ಭಕ್ತಿಯ ಭಾಗವಾಗಿ ಹುಲಿ ದೇವರಿಗೆ ತೆಂಗಿನಕಾಯಿ, ಬಾಳೆಹಣ್ಣು ಸಮರ್ಪಿಸಿ ಧನ್ಯತೆ ಅನುಭವಿಸಿದರು. ಇದೇ ವೇಳೆ ರೈತರು ಸಾಮೂಹಿಕವಾಗಿ, ಕೃಷಿಕರ ಬೆನ್ನೆಲುಬಾದ ಜಾನುವಾರುಗಳ ರಕ್ಷಿಸು ಎಂದು ಹುಲಿಯಪ್ಪನನ್ನು ಬೇಡಿಕೊಂಡು ಮನೆಯತ್ತ ಹೆಜ್ಜೆ ಹಾಕಿದರು. ನಂತರ ಹುಲಿಯಪ್ಪನ ಸನ್ನಿಧಿಯಿಂದ ತಂದ ಪ್ರಸಾದವನ್ನು ಕೊಟ್ಟಿಗೆ, ಜಾನುವಾರು, ಕೃಷಿ ಕ್ಷೇತ್ರಕ್ಕೆ ಹಾಕಿದರು. ಸಡಗರದ ಬೆಳಕಿನ ಹಬ್ಬಕಾರವಾರ: ಮನೆ ಮನೆಗಳಿಗೂ ಬೆಳಕಿನ ಸಿಂಗಾರ, ಅಂಗಡಿ ಮಳಿಗೆಗಳಲ್ಲಿ ಪೂಜೆಯ ಸಡಗರ, ಗೋಪೂಜೆಯ ಸಂಭ್ರಮದೊಂದಿಗೆ ದೀಪಾವಳಿ ಆಚರಣೆ ನಡೆಯಿತು.ದೀಪಾವಳಿ ಬೆಳಕಿನ ಹಬ್ಬ. ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಮನೆ ಮನೆಯನ್ನು, ಅಂಗಡಿ ಮಳಿಗೆಗಳನ್ನು ಸಿಂಗರಿಸಲಾಗಿತ್ತು. ಪೇಟೆ, ಪಟ್ಟಣಗಳಲ್ಲಿ ಮೋಹಕ ವಿದ್ಯುದ್ದೀಪಗಳು ಹೊಸ ಕಳೆ ತಂದಿದ್ದವು. ಅಂಗಡಿ ಮಳಿಗೆಗಳಲ್ಲಿ ಶ್ರದ್ಧೆ, ಭಕ್ತಿಯಿಂದ ಲಕ್ಷ್ಮೀಪೂಜೆ ಆಚರಿಸಲಾಯಿತು.ಮನೆ ಮನೆಗಳಲ್ಲೂ ಬಲೀಂದ್ರ ಪೂಜೆ ನೆರವೇರಿಸಲಾಯಿತು. ಗೋಪೂಜೆಯ ಸಂಭ್ರಮ ಕಳೆಗಟ್ಟಿತ್ತು. ಬಣ್ಣಗಳನ್ನು ಬಳಿದು, ಹೂವು, ಅಡಕೆಗಳಿಂದ ಗೋವನ್ನು ಸಿಂಗರಿಸಿ, ಗೋಗ್ರಾಸ ನೀಡಿ ಪೂಜೆ ಸಲ್ಲಿಸಲಾಯಿತು.
ದೀಪಾವಳಿ ಹಬ್ಬದಲ್ಲಿ ಗೃಹಬಳಕೆ ವಸ್ತುಗಳು, ಬಟ್ಟೆಗಳು ಮತ್ತಿತರ ವಸ್ತುಗಳಿಗೆ ಡಿಸ್ಕೌಂಟ್ ಘೋಷಿಸಿದ್ದರಿಂದ ವ್ಯಾಪಾರ ವಹಿವಾಟು ಕೂಡ ಜೋರಾಗಿತ್ತು. ಜನತೆ ಹೊಸ ಬಟ್ಟೆಗಳನ್ನು ಧರಿಸಿ, ಆಪ್ತರು, ಬಂಧು ಬಾಂಧವರಿಗೆ ಪರಸ್ಪರ ಸಿಹಿ ನೀಡಿ ಶುಭಾಶಯಗಳನ್ನು ಸಲ್ಲಿಸಿದರು. ಜಿಲ್ಲೆಯ ಜನತೆ ಶ್ರದ್ಧೆ, ಭಕ್ತಿ, ಸಂಭ್ರಮ, ಸಡಗರೊಂದಿಗೆ ದೀಪಾವಳಿ ಹಬ್ಬ ಆಚರಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))