ಮುಸ್ಲಿಂ ಬಾಂಧವರ ಪ್ರಮುಖ ಹಬ್ಬಗಳಲ್ಲೊಂದಾದ ಈದ್ ಮಿಲಾದನ್ನು ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿದಂತೆ ವಿವಿಧ ತಾಲೂಕುಗಳಾದ ಲಿಂಗಸುಗೂರು, ಸಿರವಾರ, ಮಾನ್ವಿ, ದೇವದುರ್ಗ, ಅರಕೇರಾ, ಮಸ್ಕಿ ಮತ್ತು ಸಿಂಧನೂರು ತಾಲೂಕುಗಳಲ್ಲಿ ಬುಧವಾರ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಮುಸ್ಲಿಂ ಬಾಂಧವರ ಪ್ರಮುಖ ಹಬ್ಬಗಳಲ್ಲೊಂದಾದ ಈದ್ ಮಿಲಾದನ್ನು ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿದಂತೆ ವಿವಿಧ ತಾಲೂಕುಗಳಾದ ಲಿಂಗಸುಗೂರು, ಸಿರವಾರ, ಮಾನ್ವಿ, ದೇವದುರ್ಗ, ಅರಕೇರಾ, ಮಸ್ಕಿ ಮತ್ತು ಸಿಂಧನೂರು ತಾಲೂಕುಗಳಲ್ಲಿ ಬುಧವಾರ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನದ ಪ್ರಯುಕ್ತ ಈದ್‌ಮಿಲಾದ್‌ ಆಚರಿಸಲಾಗುತ್ತದೆ. ಹಬ್ಬ ಹಿನ್ನೆಲೆಯಲ್ಲಿ ಮುಸ್ಲಿಮರು ತಮ್ಮ ಮನೆ, ಮಸೀದಿಗಳನ್ನು ಜಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಿದ್ದರು. ಮನೆಗಳಲ್ಲಿ ಸಿಹಿ ಪದಾರ್ಥ ತಯಾರಿಸಿ ಪರಸ್ಪರ ನೆರೆಹೊರೆಯವರಿಗೆ ಹಂಚಿದರು.

ಹಬ್ಬದ ನಿಮಿತ್ತ ಮುಸ್ಲಿಂ ಸಮಾಜದಿಂದ ಎಲ್ಲಾ ಬಡಾವಣೆಗಳ ಪ್ರಮುಖ ಮಸೀದಿಗಳಿಂದ ಮುಹಮ್ಮದ್ ಪೈಗಂಬರ್ ಅವರ ಜೀವನಚರಿತ್ರೆ ಹಾಗೂ ಸಾಧನೆಗಳ ಕುರಿತು ಬೋಧಿಸಲಾಯಿತು. ಇದೇ ವೇಳೆ ಖುರಾನ್‌, ಹದೀಸ್‌ಪಠಣೆ ಹಾಗೂ ನಾತ್‌ಗಳನ್ನು ಹಾಡಲಾಯಿತು.

ಸಂಜೆ ಎಲ್ಲ ಮಸೀದಿ, ದರ್ಗಾಗಳಿಂದ ಮೆಕ್ಕಾ, ಮದೀನಾ ನಗರಗಳ, ಇಸ್ಲಾಂ ಧಾರ್ಮಿಕ ಚಿಹ್ನೆಗಳ ಸ್ತಬ್ಧ ಚಿತ್ರದ ಮೆರವಣಿಯು ಸ್ಥಳೀಯ ತೀನ್ ಕಂದಿಲ್ ಮಾರ್ಗ ದಿಂದ ಜಾಕೀರ್ ಹುಸೇನ್ ವೃತ್ತ, ಮಹಾನಗರ ಪಾಲಿಕೆ ಕಚೇರಿ ಮುಂಭಾಗಕ್ಕೆ ಬಂದು ತಲುಪಿತು. ಮೆರವಣಿಗೆಯಲ್ಲಿ ಚಿಕ್ಕಮಕ್ಕಳು, ಯುವಕರು ಹಸಿರು ಬಣ್ಣದ ಧ್ವಜ ಪ್ರದರ್ಶಿಸುತ್ತ ಭಕ್ತಿ ಮೆರೆದರು. ಮೆರವಣಿಗೆಯುದ್ದಕ್ಕೂ ಮುಸ್ಲಿಮರು ಸಾರ್ವಜನಿಕರಿಗೆ ಕಲ್ಲಂಗಡಿ, ಚಾಕೋಲೇಟ್, ಪಾಯಸ, ವಿವಿಧ ಬಗೆಯ ತಂಪು ಪಾನೀಯಗಳು ನೀಡಲಾಯಿತು.

ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.