ಸಾರಾಂಶ
ಭಟ್ಕಳ: ಇಲ್ಲಿನ ಮುಸ್ಲಿಮರು ಮಂಗಳವಾರ ಸಂಜೆ ಆಗಸದಲ್ಲಿ ಚಂದ್ರ ಗೋಚರವಾದ ಹಿನ್ನೆಲೆಯಲ್ಲಿ ರಂಜಾನ ಮಾಸದ ಉಪವಾಸವನ್ನು ಸ್ಥಗಿತಗೊಳಿಸಿ ಬುಧವಾರ ಈದ್ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು. ಈದ್ ಉಲ್ ಫಿತ್ರ್ ಹಬ್ಬದ ವಿಶೇಷ ಪ್ರಾರ್ಥನೆಯನ್ನು ಮುಸ್ಲಿಮರು ಬುಧವಾರ ಬೆಳಗ್ಗೆ ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸನಿಹದ ಈದ್ಗಾ ಮೈದಾನದಲ್ಲಿ ನೆರವೇರಿಸಿದರು.
ಜಾಮೀಯಾ ಮಸೀದಿಯಿಂದ ಬೆಳಗ್ಗೆ ೬.೪೫ಕ್ಕೆ ಮೆರವಣಿಗೆಯಲ್ಲಿ ಸಾಗಿ ಬಂದ ಸಾವಿರಾರು ಮುಸ್ಲಿಮರು ೭.೧೫ಕ್ಕೆ ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಮಾಡಿದರು.ಈದ್ಗಾ ಮೈದಾನದಲ್ಲಿ ಜಮಾತುಲ್ ಮುಸ್ಲಿಮಿನ್‌ನ ಮುಖ್ಯಖಾಜಿ ಮೌಲಾನಾ ಖಾಜಾ ಅಕ್ರಮಿ ಮದನಿ ಅವರು ಪ್ರಾರ್ಥನೆ ನಿರ್ವಹಿಸಿ ರಂಜಾನ್ ಮಾಸದ ಉಪವಾಸ ಮತ್ತು ಈದ್ ಉಲ್ ಫಿತ್ರ್ ಹಬ್ಬದ ಮಹತ್ವದ ಕುರಿತು ಪ್ರವಚನ ನೀಡಿದರು.
ಈ ಸಂದರ್ಭದಲ್ಲಿ ಮೌಲಾನಾ ಅಬ್ದುಲ್ ರೆಹಮಾನ ಮೊತೆ ಶ್ಯಾಂ, ಮೌಲಾನಾ ಅನ್ಸಾರ್ ಮದನಿ, ಮೌಲಾನಾ ಇರ್ಶಾದ್ ನಾಯ್ತೆ ನದ್ವಿ, ಮೌಲಾನಾ ಅಬ್ದುಲ್ ಅಲೀಂ ಕಾಶ್ಮೀ ಮುಂತಾದವರಿದ್ದರು.ಬಿಳೆ ಬಟ್ಟೆ, ಟೋಪಿ ಧರಿಸಿದ್ದ ಮುಸ್ಲಿಮರು ಪರಸ್ಪರ ಅಪ್ಪುಗೆಯ ಮೂಲಕ ಈದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಈದ್ಗಾ ಮೈದಾನದಲ್ಲಿ ಸ್ಥಳವಕಾಶ ಸಾಕಾಗದೇ ಹೊರಗಿನ ಆವರಣ, ರಸ್ತೆ ಬದಿಯಲ್ಲೇ ಮುಸ್ಲೀಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸ್ಥಳೀಯ, ವಿವಿಧ ತಾಲೂಕಿನಿಂದ ಆಗಮಿಸಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಬಂದೋಬಸ್ತ್‌ನಲ್ಲಿ ಪಾಲ್ಗೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಸಂಜೆಯಿಂದಲೇ ಎಲ್ಲಡೆ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಿ ತೀವ್ರ ನಿಗಾ ಇಡಲಾಗಿತ್ತು.ಹೆಬಳೆಯ ಜಾಮೀಯಾಬಾದ್, ಮುರ್ಡೇಶ್ವರ ಸೇರಿದಂತೆ ವಿವಿಧ ಮಸೀದಿಗಳಲ್ಲೂ ಈದ್ ಉಲ್ ಫಿತ್ರ್ ಹಬ್ಬದ ಅಂಗವಾಗಿ ಬುಧವಾರ ಬೆಳಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈದ್ ಹಬ್ಬದ ಪ್ರಯುಕ್ತ ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಬಾಂಬ್ ನಿಷ್ಕ್ರೀಯ ದಳ ಕರೆಯಿಸಿ ತಪಾಸಣೆ ನಡೆಸಲಾಯಿತು.