ಜಿಲ್ಲಾದ್ಯಂತ ಸಂಭ್ರಮದ ಗಣೇಶ ಹಬ್ಬದ ಆಚರಣೆ

| Published : Sep 09 2024, 01:34 AM IST

ಸಾರಾಂಶ

ಮಂಡ್ಯ ನಗರದ ವಿವಿಧೆಡೆ ಯುವಕರು ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿಗಳು ಗಮನ ಸೆಳೆದವು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾದ್ಯಂತ ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಗೌರಿ ಹಬ್ಬದ ಮಾರನೇ ದಿನ ಗಣೇಶ ಮೂರ್ತಿಯನ್ನು ಮನೆಗೆ ತಂದು ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಯುವಜನರು, ಚಿಣ್ಣರು ಸಹ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಿದರು. ಕೆಲವು ಕಡೆ ಗೌರಿ-ಗಣೇಶ ಮೂರ್ತಿಗಳನ್ನು ಗಣೇಶ ಚತುರ್ಥಿಯಂದೇ ವಿಜಸರ್ಜನೆ ಮಾಡಿದ್ದು ಕಂಡು ಬಂತು. ಮೆರವಣಿಗೆಯೊಂದಿಗೆ ಯುವಕರು ಗೌರಿ-ಗಣೇಶನನ್ನು ತಮಟೆ ಸದ್ದಿನೊಂದಿಗೆ ಸಂಭ್ರಮದಿಂದ ಕುಣಿದು ಕುಪ್ಪಳಿಸಿ ಹಲವೆಡೆ ಭಾನುವಾರ ಸಂಜೆಯೇ ಕೆರೆ, ಕಾಲುವೆ ಹಾಗೂ ನಗರಸಭೆ ನಿಗದಿ ಪಡಿಸಿದ್ದ ಸ್ಥಳಗಳಲ್ಲಿ ವಿಸರ್ಜನೆ ಮಾಡಿದರು.

ಕೆಲವೆಡೆ ಯುವಕರು ಪ್ರತಿಷ್ಠಾಪಿಸಿದ್ದ ವಿನಾಯಕನಿಗೆ ಇಷ್ಟದ ತಿಂಡಿ ತಿನಿಸುಗಳಾದ ಮೋದಕ, ಮೋತಿಚೂರ್ ಲಾಡು, ಸಹಿ ಪಾಯಸ ಸೇರಿದಂತೆ ವಿವಿಧ ಬಗೆಯ ತಿಂಡಿಗಳನ್ನಿಟ್ಟು ನೈವೇದ್ಯ ಮಾಡಿ ಪೂಜಿಸಲಾಯಿತು.ಬಾದ್ರಪದ ಮಾಸ ಪ್ರಾರಂಭದ ದಿನಗಳಲ್ಲೇ ಗೌರಿ-ಗಣೇಶ ಹಬ್ಬಕ್ಕೆ ಅಗತ್ಯ ಸಿದ್ಧತೆಗಳನ್ನು ಮೂರು ದಿನಗಳಿಂದೆಯೇ ಮಾಡಿಕೊಳ್ಳಲಾಗಿತ್ತು. ಗಣೇಶ ಚತುರ್ಥಿ ಮುನ್ನಾ ದಿನ ಶುಕ್ರವಾರ ಜಿಲ್ಲಾದ್ಯಂತ ಗೌರಿಹಬ್ಬ ಆಚರಿಸಿದರೆ, ಮಹಿಳೆಯರು, ಹೆಣ್ಣು ಮಕ್ಕಳು ಹೊಸ ಬಟ್ಟೆ ಧರಿಸಿ, ದೇವಾಲಯಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ನಂತರ ಗೌರಿ ಮಾತೆಗೆ(ಪಾರ್ವತಿ) ಬಾಗಿನ ಸಲ್ಲಿಸಿ ಭಕ್ತಿ ಮೆರೆದರು.ಶನಿವಾರ ಗೌರಿ, ಗಣೇಶ ಮೂರ್ತಿಗಳನ್ನು ಮಂಟಪದಲ್ಲಿ ಕೂರಿಸಿ ಪೂಜಿಸಿದರು. ಬಹುತೇಕ ಮನೆಗಳಲ್ಲಿ ಗೌರಿ-ಗಣೇಶನನ್ನು ಪ್ರತಿಷ್ಠಾಪಿಸಿದ್ದ ಜನರು ಹಬ್ಬದ ದಿನ ಶನಿವಾರ ಸಂಜೆಯೇ ಮೂರ್ತಿಗಳನ್ನು ವಿಸರ್ಜಿಸಿದ್ದು ವಿಶೇಷವಾಗಿತ್ತು. ನಗರದ ಬಂದೀಗೌಡ ಬಡಾವಣೆಯಲ್ಲಿ 23 ಅಡಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆ, ವಿವಿ ನಗರದಲ್ಲಿ 17 ಅಡಿ ಎತ್ತರ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಕಾವೇರಿ ನಗರದಲ್ಲಿ 25 ಅಡಿ ಎತ್ತರ ವಿಶೇಷ ವಿನಾಯಕ ಮೂರ್ತಿಯನ್ನು ಪೂಜಿಸಲಾಯಿತು. ಉಳಿದಂತೆ ಸುಭಾಷ್ ನಗರ, ಗಾಂಧಿ ನಗರ, ಹೊಸಹಳ್ಳಿ, ಹಾಲಹಳ್ಳಿ, ತಾವರೆಗೆರೆ, ಗುತ್ತಲು, ಚಾಮುಂಡೇಶ್ವರಿನಗರ, ಅನ್ನಪೂರ್ಣೇಶ್ವರಿನಗರ, ಪೇಟೆ ಬೀದಿ, ನೆಹರೂ ನಗರದ ವಿವಿಧೆಡೆ ಗೌರಿ ಗಣಪತಿಯನ್ನು ಪ್ರತಿಷ್ಠಾಪಿಸಿ ಸಂಭ್ರಮಿಸಿದರು.

ಗಣೇಶೋತ್ಸವದ ಅಂಗವಾಗಿ ಕೆಲವು ಕಡೆ ಸಂಗೀತ ರಸ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿದ್ಯುತ್ ದೀಪಾಲಂಕಾರ ಸೇರಿದಂತೆ ಭಕ್ತರ ಗಮನ ಸೆಳಯುವಂತೆ ಹಲವು ಹೂಗಳಿಂದ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಪುಷ್ಪಮಂಟಪೋತ್ಸವವನ್ನು ಅದ್ದೂರಿಯಾಗಿ ಸಿಂಗರಿಸಲಾಗಿತ್ತು.

ಜಿಲ್ಲಾದ್ಯಂತ ಪ್ರತಿಷ್ಠಾಪಿಸಿರುವ ಗೌರಿ ಗಣೇಶ ಮೂರ್ತಿಗಳನ್ನು ಮೂರು, ಐದು, ಒಂಭತ್ತು ದಿನಗಳಂತೆ ನಿಗದಿ ಪಡಿಸಿಕೊಂಡು ಪ್ರತಿನಿತ್ಯ ವಿಶೇಷ ಪೂಜೆ ಸಲ್ಲಿಸುವರು. ಇದೇ ವೇಳೆ ಭಕ್ತರು ತೀರ್ಥ ಪ್ರಸಾದ ರೂಪದಲ್ಲಿ ಕಡ್ಲೆಕಾಳು ಗುಗ್ಗುರಿ, ಬಾತ್, ಮೊಸರನ್ನ, ಪುಳಿಯೊಗರೆಗಳನ್ನು ವಿತರಿಸುವರು. ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾಸೋಹ ಕಾರ್ಯಕ್ರಮಗಳನ್ನು ಆಯೋಜಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ನಂತರ ಕೆರೆ, ಕಾಲುವೆಗಳಲ್ಲಿ ವಿಸರ್ಜನೆ ಮಾಡಲಿದ್ದಾರೆ.