ಆದರ್ಶ ಪುರುಷರ ಜಯಂತಿ ನಾಡ ಹಬ್ಬವಾಗಿ ಆಚರಣೆ: ಎಚ್ ಎಸ್ ಚೇತನ್

| Published : Jun 28 2024, 12:55 AM IST

ಸಾರಾಂಶ

ಕುಶಾಲನಗರದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು. ಹಿರಿಯರಾದ ನಾಗಮ್ಮ ಕಾಳಪ್ಪ ಉದ್ಘಾಟಿಸಿ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಜಾತಿ ನೆಲೆಗಟ್ಟಿನಲ್ಲಿ ಮಹಾನ್ ನಾಯಕರ ಜಯಂತಿ ಆಚರಣೆ ಮಾಡುತ್ತಿರುವುದು ಇತ್ತೀಚಿನ ದಿನಗಳ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಕಾರ್ಯದರ್ಶಿ ಎಚ್ ಎಸ್ ಚೇತನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದಲ್ಲಿ ರಾಷ್ಟ್ರೀಯ ಹಬ್ಬ ಆಚರಣೆ ಸಮಿತಿ ಆಶ್ರಯದಲ್ಲಿ ತಾಲೂಕು ಮಟ್ಟದಲ್ಲಿ ನಡೆದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಮಹಾ ಚೇತನ ಗಳ ಯಾವುದೇ ಕಾರ್ಯಕ್ರಮಕ್ಕೆ ಜಾತಿಯ ಚೌಕಟ್ಟು ಅಳವಡಿಸಬಾರದು. ಅಭಿವೃದ್ಧಿಯ ಹರಿಕಾರರಾಗಿರುವ ಬೆಂಗಳೂರು ನಿರ್ಮಾತೃ ಮಹಾ ಚೇತನ ಕೆಂಪೇಗೌಡರ ಕನಸು ನನಸಾಗಿರುವುದನ್ನು ನಾವೆಲ್ಲ ನೋಡಬಹುದು.

ಸ್ವಾರ್ಥ ರಹಿತ ಆದರ್ಶ ಪುರುಷರ ಜಯಂತಿ ನಾಡ ಹಬ್ಬವಾಗಿ ಆಚರಣೆಯಾಗಬೇಕು ಎಂದರು.

ಕುಶಾಲನಗರ ರೈತ ಸಹಕಾರ ಭವನ ಸಭಾಂಗಣದಲ್ಲಿ ತಾಲೂಕು ತಹಸೀಲ್ದಾರ್ ಕಿರಣ್ ಜವರಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಹಿರಿಯರಾದ ನಾಗಮ್ಮ ಕಾಳಪ್ಪ ಅವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಈ ಸಂದರ್ಭ ಅತಿಥಿಗಳು ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎಂ ಕೆ ದಿನೇಶ್, ಗೌಡ ಸಮಾಜ ಅಧ್ಯಕ್ಷರಾದ ಗಣಿ ಪ್ರಸಾದ್, ಒಕ್ಕಲಿಗ ಗೌಡ ಯುವಕ ವೇದಿಕೆಯ ಎಂ ಡಿ ಕೃಷ್ಣಪ್ಪ, ಗೌಡ ಯುವಕ ಸಂಘದ ಅಧ್ಯಕ್ಷರಾದ ಕೊಡಗನ ಹರ್ಷ, ಹಿರಿಯ ಸಹಕಾರಿ ಧುರೀಣ ಶಾಂತಕುಮಾರ್, ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಕೆ ಟಿ ಅರುಣ್ ಕುಮಾರ್ , ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರಾದ ಸೂದನ ಎಂ ರತ್ನಾವತಿ , ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಕೆ ಪಿ ಚಂದ್ರಕಲಾ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿ ಪಿ ಶಶಿಧರ್ , ಬಿ ಬಿ ಭಾರತೀಶ್ ಮತ್ತಿತರರು ಉಪಸ್ಥಿತರಿದ್ದು ಮಾತನಾಡಿದರು.

ಕಾರ್ಯಕ್ರಮದಲ್ಲಿ ಪದ್ಮಾವತಿ ಮಹಿಳಾ ಒಕ್ಕೂಟದ ಸದಸ್ಯರು ಗೀತ ಗಾಯನ ನಡೆಸಿದರು.

ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿದ್ಯಾರ್ಥಿನಿಯರಿಂದ ನಾಡಗೀತೆ, ನಂಜುಂಡಸ್ವಾಮಿ ರೈತ ಗೀತೆ ಹಾಡಿದರು. ಶಿಕ್ಷಕಿ ಗಾಯತ್ರಿ ಅವರು ಕಾರ್ಯಕ್ರಮ ನಿರೂಪಿಸಿ ಮುಖ್ಯ ಶಿಕ್ಷಕಿ ಬಿಎನ್ ಪುಷ್ಪ ಅವರು ಸ್ವಾಗತಿಸಿ ವಂದಿಸಿದರು.