ಸಾರಾಂಶ
ಹಲವು ಕಡೆಗಳಲ್ಲಿ ಈದ್ ಮಿಲಾದ್ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಿತು. ಮೆರವಣಿಗೆಯಲ್ಲಿ ಹಾಡುಗಳು, ದಫ್ ಕುಣಿತ, ಸ್ಕೌಟ್ ವಿದ್ಯಾರ್ಥಿಗಳು ಹಾಗೂ ಮದ್ರಸದ ಮಕ್ಕಳು ಪ್ರವಾದಿ ಮುಹಮ್ಮದ್ ಪೈಗಂಬರ ಸಂದೇಶ ಸಾರಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಮಿಲಾದುನ್ನಬಿಯನ್ನು ಸೋಮವಾರ ಉಡುಪಿ ಜಿಲ್ಲಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಕಾಪು, ಉಚ್ಚಿಲ, ಮೂಳೂರು, ಪಡುಬಿದ್ರಿ, ಕಾರ್ಕಳ, ಶಿರ್ವ, ಕಟಪಾಡಿ, ನೇಜಾರು, ದೊಡ್ಡಣಗುಡ್ಡೆ, ಕುಂದಾಪುರ ಕೋಡಿ ಸೇರಿದಂತೆ ಹಲವು ಕಡೆಗಳಲ್ಲಿ ಈದ್ ಮಿಲಾದ್ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಿತು. ಮೆರವಣಿಗೆಯಲ್ಲಿ ಹಾಡುಗಳು, ದಫ್ ಕುಣಿತ, ಸ್ಕೌಟ್ ವಿದ್ಯಾರ್ಥಿಗಳು ಹಾಗೂ ಮದ್ರಸದ ಮಕ್ಕಳು ಪ್ರವಾದಿ ಮುಹಮ್ಮದ್ ಪೈಗಂಬರ ಸಂದೇಶ ಸಾರಿದರು.ಕಾಪು ಪೊಲಿಪು ಜುಮಾ ಮಸೀದಿಯ ಮೆರವಣಿಗೆಯು ಕೊಪ್ಪಲಂಗಡಿ ನೂರುಲ್ ಹುದಾ ಮದ್ರಸ, ಕೊಂಬಗುಡ್ಡೆ ಗೌಸಿಯಾ ಜುಮಾ ಮಸೀದಿ, ಮಜೂರು, ಪಕೀರ್ಣಕಟ್ಟೆ ಜುಮಾ ಮಸೀದಿಗಳ ಜೊತೆ ಸೇರಿ ಪೊಲಿಪು ಮಸೀದಿಯಲ್ಲಿ ಸಮಾಪ್ತಿಗೊಂಡಿತು. ಈ ಸಂದರ್ಭ ಕಾಪು ಖಾಝಿ ಪಿ.ಬಿ.ಅಹ್ಮದ್ ಮುಸ್ಲಿಯಾರ್ ಹಾಜರಿದ್ದರು. ಮೆರವಣಿಗೆಯಲ್ಲಿ ಆಲಂಕೃತ ವಾಹನಗಳಲ್ಲಿ ದಫ್ ಕುಣಿತ, ಮದ್ರಸ ಮಕ್ಕಳು ಗಮನ ಸೆಳೆದರು.ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಕಾರ್ಕಳ, ಕುಂದಾಪುರ ಹಾಗೂ ಉಡುಪಿ ಡಿವೈಎಸ್ಪಿ ಬಂದೋಬಸ್ತ್ ನೇತೃತ್ವ ವಹಿಸಿದ್ದರು.-----ಸಿಹಿತಿಂಡಿ - ಪಾನೀಯ ವಿತರಿಸಿದ ಹಿಂದುಗಳುಉಡುಪಿ ಸಮೀಪದ ನೇಜಾರು ಜಾಮೀಯ ಮಸೀದಿಯ ಮಿಲಾದುನ್ನಬಿ ಮೆರವಣಿಗೆಯಲ್ಲಿ ಹಿಂದೂ ಬಾಂಧವರು ಸಿಹಿತಿಂಡಿ ತಂಪು ಪಾನೀಯಗಳನ್ನು ನೀಡಿ ಕೋಮು ಸೌಹಾರ್ದತೆ ಮೆರೆದರು.
ನೇಜಾರು ಬಬ್ಬುಸ್ವಾಮಿ ಭಜನಾ ಮಂದಿರ, ಆಟೋ ಚಾಲಕ ಮಾಲಕರ ಸಂಘ, ಗುರುಗಣೇಶ್ ಕಸ್ಟ್ರಕ್ಷನ್‌ನ ಚಂದ್ರಶೇಖರ್ ಮತ್ತು ಪ್ರಕಾಶ್ ಸಹೋದರರು, ಕೇಳಾರ್ಕಳಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದವರು ತಂಪು ಪಾನೀಯ ಹಾಗೂ ಸಿಹಿ ತಿಂಡಿಗಳನ್ನು ವಿತರಿಸಿದರು. ಇವರಿಗೆ ಮಸೀದಿ ವತಿಯಿಂದ ಗೌರವ ಸ್ಮರಣಿಕೆ ನೀಡುವ ಮೂಲಕ ಕೃತಜ್ಞತೆಯನ್ನು ಸಲ್ಲಿಸಲಾಯಿತು.