ಕನ್ನಡಪ್ರಭ ವಾರ್ತೆ ಪಾವಗಡ

ನಾಗರಪಂಚಮಿ ಪ್ರಯುಕ್ತ ಸೋಮವಾರ ತಾಲೂಕಿನ ನಾಗಲಮಡಿಕೆ ಗ್ರಾಮದ ಶ್ರೀ ಅಂತ್ಯ ಸುಬ್ರಮಣ್ಯಸ್ವಾಮಿ, ಪಟ್ಟಣದ ನಾಗರಕಟ್ಟೆ ಹಾಗೂ ಇತರೆ ನಗರ ಹಾಗೂ ತಾಲೂಕಿನಾದ್ಯಂತ ನಾಗರದೇವರುಗಳ ಬಳಿ ಹುತ್ತಕ್ಕೆ ಹಾಲು ಹಾಕುವ ಮೂಲಕ ನಾಗಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದರು. ಇಲ್ಲಿನ ಶ್ರೀ ಶನಿಮಹಾತ್ಮಸ್ವಾಮಿ, ಅಮ್ಮ ಜೇಷ್ಠಾದೇವಿ, ಶೀತಲಾಂಭದೇವಿ, ಕೋಟೆ ಶ್ರೀ ಅಂಜನೇಯಸ್ವಾಮಿ, ತಂಜಲಿ ನಗರದ ಶಾಂತಿ ಬೃಂದಾವನದ ಈಶ್ವರ,ಮಹಾವಿಷ್ಣು ಹಾಗೂ ಟೋಲ್‌ಗೇಟ್‌ನ ಅಮ್ಮ ಶ್ರೀ ಚೌಡೇಶ್ವರಿ ತಾಯಿ, ರೊಪ್ಪ ಮಾರಮ್ಮ ತಾಯಿ ದೇವಸ್ಥಾನಗಳಲ್ಲಿ ಕರ್ಪೂರದ ದೀಪ ಬೆಳಗುವ ಮೂಲಕ ಹಣ್ಣು ಹೂವು ಅರ್ಪಿಸಿ ವಿವಿಧ ರೀತಿಯ ಪೂಜಾ ಕೆಂಕೈರ್ಯಗಳನ್ನು ನೆರೆವೇರಿಸಿದರು. ನಾಗರಪಂಚಮಿಯ ವಿಶೇಷ ದಿನವಾದ ಹಿನ್ನಲೆಯಲ್ಲಿ ಅಪಾರ ಸಂಖ್ಯೆಯ ಮಹಿಳೆಯರು ತೆರಳಿ ತಾಲೂಕಿನ ನಾಗಲಮಡಿಕೆಯ ಶ್ರೀ ಸುಬ್ರಮಣ್ಯಸ್ವಾಮಿ ಹಾಗೂ ಪಟ್ಟಣದ ನಾಗರಕಟ್ಟೆಗಳಲ್ಲಿ ನಾಗರ ವಿಗ್ರಹ ಹಾಗೂ ಹುತ್ತಗಳಿಗೆ ಹಾಲು ದಾರೆ ಎರೆಯುವ ಮೂಲಕ ಇಷ್ಟಾರ್ಥಗಳ ಸಿದ್ಧಿಗೆ ಭಕ್ತಿ ಭಾವದಿಂದ ನಾಗಪ್ಪನನ್ನು ವಿಶೇಷವಾಗಿ ಪ್ರಾರ್ಥಿಸಿದರು. ಬೆಳಿಗ್ಗೆಯಿಂದ ಸಂಜೆ 6 ಗಂಟೆಯವರೆವಿಗೆ ತಂಡೋಪ ತಂಡವಾಗಿ ದೇವಸ್ಥಾನಗಳಿಗೆ ತೆರಳಿದ ಮಹಿಳೆಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಶ್ರದ್ಧಾ ಭಕ್ತಿ ಮೆರೆಯುವ ಮೂಲಕ ಆಲದ ಮರದ ಪ್ರದಕ್ಷಣೆಯೊಂದಿಗೆ ಹೂವು ಹಣ್ಣುಗಳಿಂದ ಅಲಂಕರಿಸಿದ ನಾಗರ ವಿಗ್ರಹಗಳಿಗೆ ಹಾಲು ಹಾಕಿ ನೈವೇದ್ಯ ಅರ್ಪಿಸಿ ತಂಬಿಟ್ಟು ಬಾಳೆಹಣ್ಣು ಹಾಗೂ ದೇವರಿಗೆ ಅರ್ಪಿಸಿದ್ದ ತೆಂಗಿನ ಕಾಯಿ ಪ್ರಸಾದ ಸ್ವೀಕರಿಸಿದರು. ಈ ಬಾರಿಯ ನಾಗರ ಪಂಚಮಿ ತಾಲೂಕಿನಾದ್ಯಂತ ವಿಶೇಷವಾಗಿ ಆಚರಿಸುವ ಮೂಲಕ ಭಕ್ತರಲ್ಲಿ ಭಕ್ತಿಭಾವ ಹಾಗೂ ಸಡಗರ ಸಂಭ್ರಮ ವ್ಯಕ್ತವಾಗಿದ್ದು ವಿಶೇಷವಾಗಿತ್ತು.