ನಾಡಹಬ್ಬ, ರಾಷ್ಟ್ರೀಯ ಹಬ್ಬಗಳ ಆಚರಣೆ ಎಲ್ಲರ ಕರ್ತವ್ಯ

| Published : Oct 16 2025, 02:00 AM IST

ನಾಡಹಬ್ಬ, ರಾಷ್ಟ್ರೀಯ ಹಬ್ಬಗಳ ಆಚರಣೆ ಎಲ್ಲರ ಕರ್ತವ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಾಡಹಬ್ಬ ಸೇರಿದಂತೆ ರಾಷ್ಟ್ರೀಯ ಹಬ್ಬಗಳಿಗೆ ಹಾಜರಾಗುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುವುದು ಸಾಮಾನ್ಯವಾಗುತ್ತಿದೆ. ನ.1ರಂದು ಆಚರಿಸಲಿರುವ ಕನ್ನಡ ರಾಜ್ಯೋತ್ಸವವನ್ನು ಕಡ್ಡಾಯವಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕು. ಸಮಾರಂಭಕ್ಕೆ ಗೈರಾದವರ ಬಗ್ಗೆ ಈ ಬಾರಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ರಾಜೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

- ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಹೊನ್ನಾಳಿ ತಹಸೀಲ್ದಾರ್‌ ಅಭಿಮತ

- - -

- ಸಮಾರಂಭಕ್ಕೆ ಗೈರಾದವರ ಬಗ್ಗೆ ಈ ಬಾರಿ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಎಚ್ಚರಿಕೆ

- ಅಲಂಕೃತ ತೆರೆದ ವಾಹನದಲ್ಲಿ ತಾಯಿ ಭವನೇಶ್ವರಿ ಭಾವಚಿತ್ರ ಮೆರವಣಿಗೆ

- ಕನಕ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ, ಉಪನ್ಯಾಸ ಆಯೋಜನೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ನಾಡಹಬ್ಬ ಸೇರಿದಂತೆ ರಾಷ್ಟ್ರೀಯ ಹಬ್ಬಗಳಿಗೆ ಹಾಜರಾಗುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುವುದು ಸಾಮಾನ್ಯವಾಗುತ್ತಿದೆ. ನ.1ರಂದು ಆಚರಿಸಲಿರುವ ಕನ್ನಡ ರಾಜ್ಯೋತ್ಸವವನ್ನು ಕಡ್ಡಾಯವಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕು. ಸಮಾರಂಭಕ್ಕೆ ಗೈರಾದವರ ಬಗ್ಗೆ ಈ ಬಾರಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ರಾಜೇಶ್ ಕುಮಾರ್ ಎಚ್ಚರಿಕೆ ನೀಡಿದರು.

ಬುಧವಾರ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ರಾಜ್ಯೋತ್ಸವ ನಾಡಹಬ್ಬವಾಗಿದೆ. ಸಾರ್ವಜನಿಕರು, ಅಧಿಕಾರಿಗಳು, ಸಿಬ್ಬಂದಿ, ಕನ್ನಡಪರ ಎಲ್ಲ ಸಂಘಟನೆಗಳು, ಶಿಕ್ಷಕರು, ವಿದ್ಯಾರ್ಥಿಗಳು ಕಲಾ ಮೇಳದವರು ಒಟ್ಟಾಗಿ ಸೇರಿ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.

ನ.1ರ ಶನಿವಾರ ಬೆಳಗ್ಗೆ ತಾಲೂಕು ಕಚೇರಿಯಿಂದ ಅಲಂಕೃತಗೊಂಡ ತೆರೆದ ವಾಹನದಲ್ಲಿ ತಾಯಿ ಭವನೇಶ್ವರಿ ಭಾವಚಿತ್ರವನ್ನು ವಿವಿಧ ಪುಪ್ಪಗಳಿಂದ ಶೃಂಗಾರಗೊಳಿಸಿ, ಮಂಗಳವಾದ್ಯಗೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಬಳಿಕ ಕನಕ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಲಾಗುವುದು. ಉಪನ್ಯಾಸ ನೀಡಲು ಉಪನ್ಯಾಸಕರನ್ನು ಕೂಡ ನಿಗದಿಗೊಳಿಸಲಾಗುವುದು ಎಂದು ವಿವರಿಸಿದರು.

ಕನ್ನಡಪರ ಸಂಘಟನೆಗಳೂ ಸೇರಿದಂತೆ ಸಾರ್ವಜನಿಕರು, ಯುವಕ-ಯುವತಿ ಸಂಘಟನೆಗಳು ಸೇರಿದಂತೆ ಮೆರವಣಿಗೆ ನಡೆಸುವ ಬೀದಿಗಳನ್ನು ಅಲಂಕರಿಸಬೇಕು. ಒಟ್ಟಿನಲ್ಲಿ ಹಬ್ಬದ ವಾತಾವರಣ ನಿರ್ಮಿಸಿ, ನಾಡಹಬ್ಬ ಅಚ್ಚುಕಟ್ಟಾಗಿ ಹಾಗೂ ಸುಂದರವಾಗಿ ನಡೆಸೋಣ ಎಂದ ಅವರು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅತಿಥಿಗಳು, ಕಲಾ ಮೇಳಗಳ ತಂಡದವರಿಗೆ ಉಪಾಹಾರ ವ್ಯವಸ್ಥೆ ಕೂಡ ಇರುತ್ತದೆ ಎಂದು ತಿಳಿಸಿದರು.

ಪೂರ್ವಭಾವಿ ಸಭೆಯಲ್ಲಿ ಉಪ ತಹಸೀಲ್ದಾರ್ ಜಯರಾಂ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಕುಮಾರ್, ತಾಲೂಕು ದೈಹಿಕ ಶಿಕ್ಷಣ ಸಂಯೋಜಕರು ಜಗದೀಶ್, ಕೃಷಿ ಅಧಿಕಾರಿ ಪ್ರತಿಮಾ, ತೋಟಗಾರಿಕಾ ಅಧಿಕಾರಿ ರೇಖಾ, ಮೀನುಗಾರಿಕೆ ಇಲಾಖೆ ಅಧಿಕಾರಿ ಸುಮಾ, ಕಂದಾಯ ಇಲಾಖೆಯ ಅಶೋಕ ನಾಯ್ಕ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು, ಕರವೇ ಶ್ರಿನಿವಾಸ, ವಿನಯ್ ವಗ್ಗರ್, ಕತ್ತಿಗೆ ನಾಗರಾಜ್, ಮಂಜು, ಹರೀಶ್, ಮುಂತಾದವರು ಇದ್ದರು.

- - -

-15ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿ ತಾಲೂಕು ಕಚೇರಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಲೆ ತಹಸೀಲ್ದಾರ್ ರಾಜೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.