ಶಿವಮೊಗ್ಗ ವಿವಿಧೆಡೆ ಸಂಭ್ರಮದ ರಂಜಾನ್ ಆಚರಣೆ

| Published : Apr 12 2024, 01:01 AM IST

ಶಿವಮೊಗ್ಗ ವಿವಿಧೆಡೆ ಸಂಭ್ರಮದ ರಂಜಾನ್ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ನಗರದಲ್ಲಿ ಗುರುವಾರ ನಗರದಲ್ಲಿ ರಂಜಾನ್ ಹಬ್ಬ ಆಚರಣೆ ವೇಳೆ ಮತದಾನ ಕುರಿತಾದ ಅರಿವು ಮೂಡಿಸಿ ಪ್ರತಿಜ್ಞಾ ವಿಧಿ ಬೋಧಿಸುವುದರ ಮೂಲಕ ಮತದಾನ ಹಬ್ಬ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಾದ್ಯಂತ ಗುರುವಾರ ಸಂಭ್ರಮದ ರಂಜಾನ್‌ ಹಬ್ಬ ಆಚರಣೆ ಮಾಡಲಾಯಿತು. ಹಬ್ಬದ ನಿಮಿತ್ತ ನಗರದ ಈದ್ಗಾ ಮೈದಾನದಲ್ಲಿ ಸಹಸ್ರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಹೊಸ ಬಟ್ಟೆಗಳನ್ನು ತೊಟ್ಟು, ಸುಗಂಧ ದ್ರವ್ಯಗಳನ್ನು ಲೇಪಿಸಿಕೊಂಡು ಬೈಕ್‌, ಕಾರುಗಳಲ್ಲಿ ಈದ್ಗಾ ಮೈದಾನಕ್ಕೆ ಆಗಮಿಸಿ ಮೊದಲು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು.

ಈದ್ಗಾ ಮೈದಾನದಲ್ಲಿ ಸ್ಥಳದ ಕೊರತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆಯಲ್ಲೂ ವಿಶೇಷ ಪ್ರಾರ್ಥನೆ ನಡೆಯಿತು. ಈ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಸಹ ಬಂದ್‌ ಮಾಡಲಾಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಾಡು ಮಾಡಿದ್ದರು.

ನಗರದ ಗಾಂಧಿ ಬಜಾರ್‌ನ ಜಾಮಿಯಾ ಮಸೀದಿ, ಅಮೀರ್‌ ಅಹಮ್ಮದ್‌ ವೃತ್ತದಲ್ಲಿರುವ ಮಸೀದಿ ಸೇರಿದಂತೆ ನಗರದ ವಿವಿಧೆಡೆ ಕಡೆ ಸಾಮೂಹಿಕ ಪ್ರಾರ್ಥನೆ, ಶುಭಾಷಯ ವಿನಿಮಯ ನಡೆಯಿತು. ಅಲ್ಲದೆ, ಮುಸ್ಲಿಂಮರಿಂದ ಬಡವರಿಗೆ ಹಣವನ್ನು ದಾನವಾಗಿ ನೀಡಲಾಯಿತು.

ಮತದಾನ ಜಾಗೃತಿ: ಮಹಾನಗರ ಪಾಲಿಕೆ ಶಿವಮೊಗ್ಗ ಮೇ 7ರಂದು ನಡೆಯುವ ಲೋಕಸಭಾ ಚುನಾವಣೆ ಸಂಬಂಧ ಗುರುವಾರ ನಗರದ ಮಾದರಿ ಪಾಳ್ಯ, ಶಾಂತಿ ನಗರ, ಮುಂತಾದ ಕಡೆ ಮುಸ್ಲಿಂ ಬಾಂಧವರ ರಂಜಾನ್ ಹಬ್ಬದ ಪ್ರಯುಕ್ತ ನಡೆಸುವ ಪ್ರಾರ್ಥನೆ ಸಂದರ್ಭದಲ್ಲಿ ಮತದಾನ ಕುರಿತಾದ ಅರಿವು ಮೂಡಿಸಿ ಪ್ರತಿಜ್ಞಾ ವಿಧಿ ಬೋಧಿಸುವುದರ ಮೂಲಕ ಮತದಾನ ಹಬ್ಬ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಾಲಿಕೆಯ ಸ್ವೀಪ್ ತಂಡದವರು ಹಾಜರಿದ್ದರು.

ಆನಂದಪುರದಲ್ಲಿ ಸಂಭ್ರಮದ ರಂಜಾನ್: ಆನಂದಪುರ, ದಾಸಕೊಪ್ಪ ಹಾಗೂ ಯಡೇಹಳ್ಳಿ ಭಾಗದ ಮುಸ್ಲಿಂರು ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯೊಂದಿಗೆ ಯಡೇಹಳ್ಳಿ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರ ಮೂಲಕ ರಂಜಾನ್ ಹಬ್ಬವನ್ನು ಆಚರಿಸಿದರು.

ಸೊರಬದಲ್ಲೂ ಈದ್‌ ಉಲ್‌ ಫಿತ್ರ್:ಪಟ್ಟಣದಲ್ಲಿ ಜಾಮೀಯಾ ಮಸೀದಿ ವತಿಯಿಂದ ರಂಜಾನ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಗುರುವಾರ ಸಂಭ್ರಮದಿಂದ ಆಚರಿಸಿದರು.

ಆತ್ಮ ಶುದ್ಧೀಕರಣ, ಸನ್ನಡತೆಗೆ ಮಾರ್ಗ ತೋರಿಸುವ ‘ರಂಜಾನ್’ ಮುಸ್ಲಿಂ ಸಮುದಾಯಕ್ಕೆ ಪವಿತ್ರ ತಿಂಗಳು. ಈ ಪವಿತ್ರ ತಿಂಗಳಿನಲ್ಲಿ ಮುಸ್ಲಿಮರಿಗೆ ಉಪವಾಸ ವ್ರತ ಅತ್ಯಂತ ಮಹತ್ವದ್ದು. ಈ ವ್ರತ ಅಂತ್ಯಗೊಳಿಸುವ ಮೂಲಕ ರಂಜಾನ್ ಹಬ್ಬ ಆಚರಿಸಲಾಯಿತು.

ಬೆಳಗ್ಗೆ ಪಟ್ಟಣದಲ್ಲಿ ರಂಗಮಂದಿರ ಮುಂಭಾಗದ ಈದ್ಗಾ ಮೈದಾನದಲ್ಲಿ ಜಮಾಯಿಸಿದ ಸಾವಿರಾರು ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಇದಕ್ಕೂ ಮೊದಲು ಮಸೀದಿಯಿಂದ ಮುಖ್ಯರಸ್ತೆ ಮಾರ್ಗವಾಗಿ ಈದ್ಗಾ ಮೈದಾನದವರೆಗೆ ಮೆರವಣಿಗೆ ನಡೆಸಿದರು.

ಅಂಜುಮನ್ ಇಸ್ಲಾಹುಲ್ ಮುಸ್ಲಿಮೀನ್ ಜಾಮೀಯಾ ಮಸೀದಿಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಸಾಬ್, ಉಪಾಧ್ಯಕ್ಷ ಟಿ.ವಜೀರ್ ಅಹ್ಮದ್, ಕಾರ್ಯದರ್ಶಿ ಮೊಹಮ್ಮದ್ ಸುಹೇಲ್, ಮುಖಂಡರಾದ ಆರ್.ಎಂ. ಫಯಾಜ್ ಅಹ್ಮದ್, ಸೈಯದ್ ಮೆಹಬೂಬ್, ಸೈಯದ್ ನಜೀರ್, ಆರ್. ಅಬ್ದುಲ್ ರಶೀದ್, ಯು. ಸೈಯದ್ ಸ್ವಾಲೇಹ, ಅತಿಕ್ ಉರ್ ರೆಹಮಾನ್, ಯು. ಫಯಾಜ್ ಅಹಮದ್, ಮಹ್ಮದ್ ಆರೀಪ್, ಸುಜಾಯತ್ ಉಲ್ಲಾ, ಡಾ. ಸೈಯದ್ ಹಾಷಂ, ಎಂ.ನೂರು ಅಹ್ಮದ್ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.