ನಗರ ಸೇರಿದಂತೆ ಜಿಲ್ಲಾದ್ಯಂತ ಕಳೆದ ಎರಡ್ಮೂರು ದಿನಗಳಿಂದ ಮನೆ ಮನಗಳಲ್ಲಿ ಸಂಭ್ರಮದ ಬೆಳಕು ಸೂಸುವ ಬೆಳಕಿನ ಹಬ್ಬ ದೀಪಾವಳಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗಿದ್ದುö, ಮಂಗಳವಾರ ಹಟ್ಟಿ ಲಕ್ಷ್ಮೀಗೆ ಪೂಜೆ ಸಲ್ಲಿಸುವ ಮೂಲಕ ಸಂಪನ್ನಗೊಳಿಸಲಾಯಿತು.

ಹಾವೇರಿ:

ನಗರ ಸೇರಿದಂತೆ ಜಿಲ್ಲಾದ್ಯಂತ ಕಳೆದ ಎರಡ್ಮೂರು ದಿನಗಳಿಂದ ಮನೆ ಮನಗಳಲ್ಲಿ ಸಂಭ್ರಮದ ಬೆಳಕು ಸೂಸುವ ಬೆಳಕಿನ ಹಬ್ಬ ದೀಪಾವಳಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗಿದ್ದುö, ಮಂಗಳವಾರ ಹಟ್ಟಿ ಲಕ್ಷ್ಮೀಗೆ ಪೂಜೆ ಸಲ್ಲಿಸುವ ಮೂಲಕ ಸಂಪನ್ನಗೊಳಿಸಲಾಯಿತು.

ಕಳೆದ ಮೂರು ದಿನಗಳಿಂದ ಜಿಲ್ಲೆಯ ಜನತೆ ದೀಪಾವಳಿ ಹಬ್ಬದಾಚರಣೆಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿದರು. ಹಬ್ಬದ ಮೊದಲನೇ ದಿನ ನರಕ ಚತುರ್ದಶಿಯಂದು ನೀರು ತುಂಬುವ ಹಬ್ಬವನ್ನು ಆಚರಿಸಿ, ಬಳಿಕ ಎರೆದುಕೊಳ್ಳುವ ಮೂಲಕ ಅಭ್ಯಂಜನ ಸ್ನಾನ ಮಾಡಿ ಹೊಸಬಟ್ಟೆ ತೊಟ್ಟು ಸಂಭ್ರಮಿಸಿದರು. ಎರಡನೇ ದಿನ ದೀಪಾವಳಿ ಅಮವಾಸ್ಯೆಯಂದು ಮನೆಗಳಲ್ಲಿ ಲಕ್ಷ್ಮೀದೇವಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆಯನ್ನು ನೆರವೇರಿಸಿದರು. ಇನ್ನೂ ಕೆಲವರು ದೀಪಾವಳಿಯ ಬಲಿಪಾಢ್ಯಮಿಯಾದ ಮಂಗಳವಾರ ದಿನದಂದು ಮನೆಗಳಲ್ಲಿ ಹಟ್ಟಿ ಲಕ್ಷ್ಮೀ ಪೂಜೆ ಹಾಗೂ ಅಂಗಡಿಗಳಲ್ಲಿ ಲಕ್ಷ್ಮೀ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರು. ಸಂಜೆಯಾಗುತ್ತಿದ್ದಂತೆ ಮನೆಯಲ್ಲಿರುವ ಬೈಕ್, ಟ್ರ್ಯಾಕ್ಟರ್‌, ಕಾರು, ಟಾಟಾಏಸ್, ಆಟೋರಿಕ್ಷಾ ಸೇರಿದಂತೆ ವಿವಿಧ ವಾಹನಗಳಿಗೆ ವಿದ್ಯುದ್ದೀಪಾಲಂಕಾರ ಮಾಡಿ ಪೂಜೆ ಸಲ್ಲಿಸಿದರೆ, ಇನ್ನು ಅಂಗಡಿಕಾರರು ಅಂಗಡಿಗಳಲ್ಲಿ ಲಕ್ಷ್ಮೀದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮುತ್ತೈದೆಯರಿಗೆ ಉಡಿ ತುಂಬಿ ಖುಷಿಪಟ್ಟರು.

ಹಟ್ಟಿ ಲಕ್ಕಮ್ಮನ ಪೂಜೆ:

ದೀಪಾವಳಿ ಹಬ್ಬದ ಮೂರನೇ ದಿನ ಬಲಿಪಾಢ್ಯಮಿ ದಿನದಂದು ಮಂಗಳವಾರ ಮನೆಯ ಕೊಟ್ಟಿಗೆಗಳಲ್ಲಿ ಸಗಣಿಯಲ್ಲಿ ಲಕ್ಷ್ಮೀದೇವಿಯನ್ನು ಪ್ರತಿಷ್ಠಾಪನೆ ಮಾಡಿದರು. ಜತೆಗೆ ಮನೆ, ಕೊಟ್ಟಿಗೆ, ವ್ಯಾಪಾರ, ಉದ್ಯೋಗಕ್ಕೆ ಬಳಸುವ ಎಲ್ಲ ವಸ್ತುಗಳನ್ನಿಟ್ಟು, ಅರಿಶಿಣ-ಕುಂಕುಮ, ಉತ್ತರಾಣಿ ಕಡ್ಡಿ, ಚೆಂಡು ಹೂವು, ಸೇವಂತಿಗೆ, ಏಕ್ಕಿಹೂವು, ಆನೆಬಡ್ಡಿಹೂವು, ಗಲಾಟಿ ಹೂವು, ಹೊನ್ನಾರಕಿ ಹೂವು, ಮಾವಿನ ತಳಿರು ತೋರಣ, ಬಿಳಿಜೋಳ ದಂಟು, ಬಗಣಿಗರಿ, ಕಬ್ಬು, ಸೀರೆ ಕುಪ್ಪಸ, ವಿದ್ಯುದ್ದೀಪಾಲಂಕಾರ ಸೇರಿದಂತೆ ವಿವಿಧ ಅಲಂಕಾರಿಕ ಸಾಮಗ್ರಿಗಳಿಂದ ಶೃಂಗರಿಸಿ ಹಟ್ಟಿಲಕ್ಷ್ಮೀ ದೇವಿಯನ್ನು ಪೂಜಿಸಿದರು. ಬಳಿಕ ಮುತ್ತೈದೆಯರು ಆರತಿ ಬೆಳಗಿ, ಉಡಿ ತುಂಬಿಕೊಂಡರು. ಹಟ್ಟಿ ಲಕ್ಕಮ್ಮನ ಕುರಿತಾದ ಸೋಬಾನೆ ಪದಗಳನ್ನು ಹೇಳುವ ಮೂಲಕ ಜನಪದ ಸಂಸ್ಕೃತಿಯ ಮೆರುಗನ್ನು ಹೆಚ್ಚಿಸಿದರು. ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ನೈವೇದ್ಯವನ್ನು ಸಮರ್ಪಣೆಗೈದು, ಹಬ್ಬದೂಟವನ್ನು ಸವಿಯುವ ಮೂಲಕ ದೀಪಾವಳಿ ಸಂಭ್ರಮಿಸಿದರು.

ಜಾನುವಾರುಗಳಿಗೆ ಸಿಂಗಾರ:

ಗ್ರಾಮೀಣ ಭಾಗದಲ್ಲಿಯೂ ದೀಪಾವಳಿ ಹಬ್ಬದ ಆಚರಣೆ ಜೋರಾಗಿತ್ತುö. ಯುವ ರೈತರು ಕೊಟ್ಟಿಗೆಯಲ್ಲಿನ ದನ-ಕರುಗಳ ಮೈತೊಳೆದು, ಹೊಸದಾಗಿ ಮಾರುಕಟ್ಟೆಯಿಂದ ತಂದ ಹಗ್ಗ, ರಿಬ್ಬನ್, ಗಂಟೆ, ಗೆಜ್ಜೆ ಸರಗಳನ್ನು ಎತ್ತುಗಳಿಗೆ ಕಟ್ಟಿ ಸಿಂಗರಿಸಿ ಪೂಜಿಸಿದರು. ಬಳಿಕ ಕೆಲ ಗ್ರಾಮಗಳಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಿದರು. ಹೋರಿಗಳನ್ನು ಸಿಂಗರಿಸಿ ಗ್ರಾಮದ ತುಂಬೆಲ್ಲಾ ಮೆರವಣಿಗೆ ಕರಿ ಬಿಟ್ಟು ಹಬ್ಬವನ್ನು ಸಂಭ್ರಮಿಸಿದರು.