ಒಂದೆಡೆ ಹೋರಿಗಳ ಕೊರಳಿಗೆ ಕಟ್ಟಿದ ಗಂಟೆಗಳ ಝಣಝಣ ಸದ್ದು, ಮತ್ತೊಂದೆಡೆ ಯುವಕರ ಸಿಳ್ಳೆ, ಕೇಕೆ, ಜೈಕಾರ. ಅಖಾಡಕ್ಕೆ ಲಗ್ಗೆ ಇಡುತ್ತಿದ್ದಂತೆ ಧೂಳೆಬ್ಬಿಸುತ್ತಾ ಮುನ್ನುಗ್ಗುವ ಹೋರಿಗಳು, ಅವುಗಳ ಬೆನ್ನಟ್ಟುತ್ತಾ ಕೊಬ್ಬರಿ ಹರಿಯಲು ಮುಗಿಬಿದ್ದ ಯುವಕರು... ಇಂತಹ ರೋಚಕ ದೃಶ್ಯಗಳಿಗೆ ನಗರದ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗ ಸೇರಿದಂತೆ ಜಿಲ್ಲಾದ್ಯಂತ ಮಂಗಳವಾರ ಸಾಕ್ಷಿಯಾಯಿತು.
ಬಲಿಪಾಡ್ಯಮಿಯಂದು ಮೈನವಿರೇಳಿಸಿದ ಹೋರಿ ಬೆದರಿಸುವ ಹಬ್ಬ
ಹೂವು, ರಿಬ್ಬನ್, ಬಲೂನ್ಗಳಿಂದ ಮದುಮಗಳಂತೆ ಸಿಂಗಾರಗೊಂಡ ಹೋರಿಗಳ ಶರವೇಗದ ಓಟ
ಕೊಬ್ಬರಿ ಹರಿಯಲು ಯುವಕರ ಸಾಹಸ
ಕನ್ನಡಪ್ರಭ ವಾರ್ತೆ ಹಾವೇರಿಒಂದೆಡೆ ಹೋರಿಗಳ ಕೊರಳಿಗೆ ಕಟ್ಟಿದ ಗಂಟೆಗಳ ಝಣಝಣ ಸದ್ದು, ಮತ್ತೊಂದೆಡೆ ಯುವಕರ ಸಿಳ್ಳೆ, ಕೇಕೆ, ಜೈಕಾರ. ಅಖಾಡಕ್ಕೆ ಲಗ್ಗೆ ಇಡುತ್ತಿದ್ದಂತೆ ಧೂಳೆಬ್ಬಿಸುತ್ತಾ ಮುನ್ನುಗ್ಗುವ ಹೋರಿಗಳು, ಅವುಗಳ ಬೆನ್ನಟ್ಟುತ್ತಾ ಕೊಬ್ಬರಿ ಹರಿಯಲು ಮುಗಿಬಿದ್ದ ಯುವಕರು... ಇಂತಹ ರೋಚಕ ದೃಶ್ಯಗಳಿಗೆ ನಗರದ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗ ಸೇರಿದಂತೆ ಜಿಲ್ಲಾದ್ಯಂತ ಮಂಗಳವಾರ ಸಾಕ್ಷಿಯಾಯಿತು.
ದೀಪಾವಳಿಯ ಬಲಿಪಾಡ್ಯಮಿ ಅಂಗವಾಗಿ ವೀರಭದ್ರೇಶ್ವರ ದೇವಸ್ಥಾನ ಆಡಳಿತ ಮಂಡಳಿ ಆಯೋಜಿಸಿದ್ದ ಸಾಂಪ್ರದಾಯಿಕ ಕೊಬ್ಬರಿ ಹೋರಿ ಬೆದರಿಸುವ ಹಬ್ಬ ಜನಾಕರ್ಷಣೆಯ ಕೇಂದ್ರವಾಗಿತ್ತು. ಉತ್ತರ ಕರ್ನಾಟಕದ ಕೃಷಿ ಸಂಸ್ಕೃತಿ ಹಾಗೂ ಗ್ರಾಮೀಣ ಜನಪದ ಕ್ರೀಡೆಯ ಪ್ರತೀಕವಾಗಿರುವ ಈ ಹಬ್ಬವನ್ನು ಕಣ್ತುಂಬಿಕೊಳ್ಳಲು ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಜನರು ಆಗಮಿಸಿದ್ದರು.ನಗರದ ಮೈಲಾರ ಮಹದೇವ ವೃತ್ತದಿಂದ ಹಳ್ಳೂರು ಓಣಿಯವರೆಗೆ ಹೋರಿಗಳನ್ನು ಓಡಿಸಲು ವ್ಯವಸ್ಥೆ ಮಾಡಲಾಗಿತ್ತು. ಕೃಷಿ ಚಟುವಟಿಕೆಗಳಿಂದ ಕೊಂಚ ವಿರಾಮ ಪಡೆದಿದ್ದ ರೈತರು ತಮ್ಮ ನೆಚ್ಚಿನ ಹೋರಿಗಳನ್ನು ಸಿಂಗರಿಸಿಕೊಂಡು ಅಖಾಡಕ್ಕೆ ಕರೆತಂದಿದ್ದರು. ಹೋರಿ ಅಖಾಡಕ್ಕೆ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟುತ್ತಿತ್ತು. ತಮ್ಮಿಷ್ಟದ ಹೋರಿಗಳ ಹೆಸರಿನ ಧ್ವಜಗಳನ್ನು ಹಿಡಿದ ಯುವಕರು ಅಖಾಡದ ಸುತ್ತಲೂ ಸಂಭ್ರಮದಿಂದ ಓಡಾಡಿ ಹಬ್ಬದ ಕಳೆ ಹೆಚ್ಚಿಸಿದರು.
ಹೋರಿಗಳ ಓಟಕ್ಕೆ ಯುವಕರ ಸಾಹಸ:ಆಯೋಜಕರ ಸೂಚನೆ ಸಿಗುತ್ತಿದ್ದಂತೆ ರೈತರು ಹೋರಿಗಳನ್ನು ಅಖಾಡಕ್ಕೆ ಬಿಡುತ್ತಿದ್ದರು. ಜನಸಾಗರದ ನಡುವೆ ಮಿಂಚಿನ ವೇಗದಲ್ಲಿ ನುಗ್ಗಿ ಸಾಗುತ್ತಿದ್ದ ಹೋರಿಗಳನ್ನು ಹಿಡಿಯಲು ಯುವಕರು ಮುಗಿಬೀಳುತ್ತಿದ್ದರು. ಹೋರಿಗಳ ಶರವೇಗದ ಓಟ, ಅವುಗಳನ್ನು ಬೆನ್ನಟ್ಟುವ ಯುವಕರ ಸಾಹಸ ಹಾಗೂ ಕೊಬ್ಬರಿ ಹರಿಯುವ ಪೈಪೋಟಿ ನೋಡುಗರಲ್ಲಿ ರೋಮಾಂಚನ ಮೂಡಿಸಿತು. ಹೋರಿಗಳು ಜನರ ನಡುವೆಯೇ ದಾರಿ ಮಾಡಿಕೊಂಡು ಓಡುತ್ತಿದ್ದಂತೆ ಸುತ್ತಲೂ ನಿಂತಿದ್ದ ಅಭಿಮಾನಿಗಳಿಂದ ಸಿಳ್ಳೆ, ಕೇಕೆ, ಚಪ್ಪಾಳೆಗಳ ಸುರಿಮಳೆಯೇ ಹರಿಯುತ್ತಿತ್ತು.
ಈ ಬಾರಿ ಯಾವುದೇ ಬಹುಮಾನಗಳನ್ನು ಘೋಷಿಸದೆ, ಕೇವಲ ಮನರಂಜನೆ ಹಾಗೂ ಸಂಪ್ರದಾಯದ ಮುಂದುವರಿಕೆಯ ಉದ್ದೇಶದಿಂದ ಹಬ್ಬ ಆಯೋಜಿಸಲಾಗಿತ್ತು. ಆದರೂ ಹೋರಿಗಳನ್ನು ಹಿಡಿದು ಕೊಬ್ಬರಿ ಕೀಳುವ ಸಾಹಸದಲ್ಲಿ ಪಾಲ್ಗೊಳ್ಳಲು ಯುವಕರ ಉತ್ಸಾಹವೇನೂ ಕಡಿಮೆಯಾಗಿರಲಿಲ್ಲ.ಒಟ್ಟಾರೆ, ದೀಪಾವಳಿಯ ಸಂಭ್ರಮಕ್ಕೆ ಗ್ರಾಮೀಣ ಸೊಗಡಿನ ಮೆರುಗು ನೀಡಿದ ಹೋರಿ ಬೆದರಿಸುವ ಹಬ್ಬ ಹಾವೇರಿಯ ಜನಪದ ಪರಂಪರೆ, ರೈತರ ಅಭಿಮಾನ ಹಾಗೂ ಯುವಜನರ ಸಾಹಸವನ್ನು ಮತ್ತೊಮ್ಮೆ ಅನಾವರಣಗೊಳಿಸಿತು.
ಮದುಮಗಳಂತೆ ಶೃಂಗಾರಗೊಂಡ ಹೋರಿಗಳು..ಹಬ್ಬಕ್ಕಾಗಿ ರೈತರು ತಮ್ಮ ಹೋರಿಗಳನ್ನು ವಿಶೇಷವಾಗಿ ಸಿಂಗರಿಸಿದ್ದರು. ದಷ್ಟಪುಷ್ಟವಾದ ಎತ್ತುಗಳಿಗೆ ಕೊಂಬಣಸು, ಜೂಲಾ, ಗೆಜ್ಜೆಸರ, ಗಂಟೆ, ರಿಬ್ಬನ್, ಬಲೂನ್ ಹಾಗೂ ಕೊಬ್ಬರಿಗಳನ್ನು ಕಟ್ಟಿ ಮದುಮಗಳಂತೆ ಅಲಂಕರಿಸಲಾಗಿತ್ತು. ಹಾವೇರಿ ನಗರದ ಯಾಲಕ್ಕಿ ಓಣಿ, ನೇತಾಜಿ ನಗರ, ಇಜಾರಿಲಕಮಾಪುರ, ಅಂಬೇಡ್ಕರ್ ನಗರ, ಶಿವಲಿಂಗನಗರ, ಶಿವಾಜಿನಗರ ಸೇರಿದಂತೆ ವಿವಿಧ ಬಡಾವಣೆಗಳ ರೈತರು ತಮ್ಮ ಹೋರಿಗಳೊಂದಿಗೆ ಪಾಲ್ಗೊಂಡಿದ್ದರು.
ಹೆಸರಿನಲ್ಲೂ ಹೋರಿಗಳ ಹವಾ..ಹೋರಿಗಳ ಓಟದಷ್ಟೇ ಅವುಗಳಿಗೆ ಇಟ್ಟಿದ್ದ ವಿಭಿನ್ನ ಹೆಸರುಗಳು ಕೂಡ ಜನರ ಗಮನ ಸೆಳೆದವು. ಹಾವೇರಿ ಸಲಗ, ಹಾವೇರಿ ಭೈರವ, ಹಾವೇರಿ ಹುಲಿ, ಜಟಾಯು, ಅನ್ನದಾತರ ಅಪರಂಜಿ, ಹಾವೇರಿ ಸರ್ಕಾರ, ರಾಜಹಂಸ, ಲಕಮಾಪುರ ಕೋಟಿಗೊಬ್ಬ, ಇಮ್ಮಡಿ ಪುಲಕೇಶಿ, ಹಾವೇರಿ ಪವರ್, ಡಾನ್, ಕಿಂಗ್, ಜ್ಯೂನಿಯರ್ ಕಿಂಗ್, ಲಕಮಾಪುರ ಆರ್ಸಿಬಿ, ಜನನಾಯಕ, ಹಾವೇರಿ ಭೀಮ, ಆಕ್ಷನ್ ಕಿಂಗ್, ಹೈಸ್ಪೀಡ್ ಭಗತ್ಸಿಂಗ್, ಸೂರ್ಪನಖಿ, ದುಶ್ಯಾಸನ, ಹಾವೇರಿ ದುಷ್ಟ, ವೇದಾ, ಭೈರವ ಸೇರಿದಂತೆ ಹಲವು ಹೆಸರುಗಳು ಹೋರಿ ಪ್ರಿಯರ ಕುತೂಹಲಕ್ಕೆ ಕಾರಣವಾದವು.
