ಕೊಡಗಿನ ಜೈನಕಾಶಿ ಮುಳ್ಳೂರು ಜೈನ ಬಸದಿ ಕೇಂದ್ರದಲ್ಲಿ ಸಂಭ್ರಮದ ರಾಜ್ಯೋತ್ಸವ
KannadaprabhaNewsNetwork | Published : Nov 03 2023, 12:30 AM IST
ಕೊಡಗಿನ ಜೈನಕಾಶಿ ಮುಳ್ಳೂರು ಜೈನ ಬಸದಿ ಕೇಂದ್ರದಲ್ಲಿ ಸಂಭ್ರಮದ ರಾಜ್ಯೋತ್ಸವ
ಸಾರಾಂಶ
ಜೈನ ಬಸದಿ ಕೇಂದ್ರದ ಮುಂಭಾಗದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕನ್ನಡ ನಾಡು ನುಡಿಯ ವಿಶೇಷತೆ ಸಾರುವ ನೃತ್ಯರೂಪಕ, ಹೊಯ್ಸಳರ ವಂಶ ಉದಯವಾದ ನೃತ್ಯರೋಪಕ ಸೇರಿದಂತೆ ಕರ್ನಾಟಕದ ಸಂಸ್ಕೃತಿ ಪರಂಪರೆ ಸಾರುವ ನೃತ್ಯರೂಪಕಗಳನ್ನು ಪ್ರದರ್ಶಿಸಿದರು.
ಕನ್ನಡ ಪ್ರಭ ವಾರ್ತೆ ಶನಿವಾರಸಂತೆ 68ನೇ ಕನ್ನಡ ರಾಜ್ಯೋತ್ಸವವನ್ನು ಸಮಿಪದ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಭಿನ್ನವಾಗಿ ಆಚರಿಸಲಾಯಿತು. ಕೊಡಗಿನ ಜೈನಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಮುಳ್ಳೂರು ತ್ರಿವಳಿ ಜೈನ ಬಸದಿ ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಬೆಳಗ್ಗೆ ಶಾಲಾ ಆವರಣದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಕನ್ನಡ ಧ್ವಜರೋಹಣ ನೇರವೇರಿಸಿದ ಬಳಿಕ ಶಾಲಾ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್ ಮತ್ತು ವಿದ್ಯಾರ್ಥಿಗಳು ನಿರ್ಮಿಸಿದ 15 ಅಡಿ ಎತ್ತರದ ಕನ್ನಡದ ಬೃಹತ್ ತೇರನ್ನು ಶಾಲಾ ಮುಂಭಾಗದಿಂದ ಸಮೀಪದ ಜೈನ ಬಸದಿ ಕೇಂದ್ರಕ್ಕೆ ಮೆರವಣಿಗೆ ಮೂಲಕ ಹೋಗಲಾಯಿತು. ತೇರಿನ ಮೇಲ್ಭಾಗದಲ್ಲಿ ತಾಯಿ ಭವನೇಶ್ವರಿ ಮತ್ತು ಕರ್ನಾಟಕದ ಭೂಪಟ ರಾರಾಜಿಸುತ್ತಿತ್ತು. ಕನ್ನಡದ ಪ್ರಸಿದ್ದ ಕವಿಗಳು, ಸಾಹಿತಿಗಳು, ವಿಜ್ಞಾನಿಗಳು, ಕರ್ನಾಟಕದ ಉದಯಕ್ಕೆ ಶ್ರಮಿಸಿದ ಹಿರಿಯರು, ಚಂದ್ರಯಾನ-3ಯಲ್ಲಿ ಪಾಲ್ಗೊಂಡಿದ್ದ ಕನ್ನಡ ವಿಜ್ಞಾನಿಗಳ ಭಾವಚಿತ್ರ ಹಾಗೂ ಹೂವಿನ ಹಾರಗಳಿಂದ ತೇರು ಅಲಂಕೃತಗೊಂಡಿತ್ತು. ಕನ್ನಡ ತೇರಿನ ಶೋಭಾಯಾತ್ರೆಯಲ್ಲಿ ಪೋಷಕರು ಕಳಸ ಹೊತ್ತು ತೇರಿನ ಮುಂಭಾಗದಲ್ಲಿ ಸಾಗಿದರೆ ವಿದ್ಯಾರ್ಥಿಗಳು ಕನ್ನಡಪರ ಘೋಷಣೆಗಳನ್ನು ಮೊಳಗಿಸುತ್ತಾ ಜೈನ ಬಸದಿ ಕೇಂದ್ರದತ್ತ ಹೆಜ್ಜೆ ಹಾಕಿದರು. ಜೈನ ಬಸದಿ ಕೇಂದ್ರದ ಮುಂಭಾಗದಲ್ಲಿರುವ ಹಳೆಕನ್ನಡ ಶಾಸನಗಳಿಗೆ ಪೂಜೆ ಸಲ್ಲಿಸಿದ ಬಳಿಕ ಜೈನ ಬಸದಿ ಕೇಂದ್ರದ ಮುಂಭಾಗದ ತಂಪಾದ ಮರದ ನೆರಳಿನಲ್ಲಿ ಸಾಂಕೇತಿಕವಾಗಿ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹವ್ಯಾಸಿ ಇತಿಹಾಸ ಸಂಶೋಧಕ ಮತ್ತು ಮೂಲ ಮುಳ್ಳೂರು ನಿವಾಸಿಯಾದ ಮುಳ್ಳೂರು ಸತೀಶ್ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕೆ.ಆರ್. ಪೇಟೆಯ ನಿವೃತ್ತ ಆಡಿಟ್ ಅಧಿಕಾರಿ ಎನ್.ಎಸ್. ಲೋಕೇಶ್ ವಿಶ್ವಕರ್ಮ ಮಾತನಾಡಿದರು. ಎಸ್‍ಡಿಎಂಸಿ ಅಧ್ಯಕ್ಷೆ ಬಿಂದು ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯ ವೆಂಕಟೇಶ್, ಪ್ರಮುಖರಾದ ಸುರೇಶ್, ವೇದಕುಮಾರ್, ಶಾಲೆಯ ಕ್ರಿಯಾಶೀಲ ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್, ಅತಿಥಿ ಶಿಕ್ಷಕಿ ಎಂ.ಆರ್. ನವ್ಯ, ಎಸ್‍ಡಿಎಂಸಿ ಪದಾಧಿಕಾರಿಗಳು ಸದಸ್ಯರು, ಗ್ರಾಮಸ್ಥರು ಪಾಲಗೊಂಡಿದ್ದರು. ವಿದ್ಯಾರ್ಥಿಗಳು ಭಾಷಣ ಸೇರಿದಂತೆ ಕನ್ನಡದ ಬಗ್ಗೆ ವಿವಿಧ ಮಾಹಿತಿಗಳನ್ನು ವೇದಿಕೆಯಲ್ಲಿ ಪ್ರಸ್ತುತ ಪಡಿಸಿದರು. ಜೈನ ಬಸದಿ ಕೇಂದ್ರದ ಮುಂಭಾಗದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕನ್ನಡ ನಾಡು ನುಡಿಯ ವಿಶೇಷತೆ ಸಾರುವ ನೃತ್ಯರೂಪಕ, ಹೊಯ್ಸಳರ ವಂಶ ಉದಯವಾದ ನೃತ್ಯರೋಪಕ ಸೇರಿದಂತೆ ಕರ್ನಾಟಕದ ಸಂಸ್ಕೃತಿ ಪರಂಪರೆ ಸಾರುವ ನೃತ್ಯರೂಪಕಗಳನ್ನು ಪ್ರದರ್ಶಿಸಿದರು.