ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಹೊರವಲಯದಲ್ಲಿರುವ ಸಿದ್ದಲಿಂಗಪುರದಲ್ಲಿ ಸುಬ್ರಹ್ಮಣ್ಯ ಷಷ್ಠಿ ಜಾತ್ರೆಯು ಶನಿವಾರ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು. ಈ ಜಾತ್ರೆಯಲ್ಲಿ ಭಕ್ತರ ದಂಡು ಪಾಲ್ಗೊಂಡಿತ್ತು.ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿರುವ ಸಿದ್ದಲಿಂಗಪುರ ಬಳಿಯ ಶ್ರೀ ಸುಬ್ರಹ್ಮಣೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಕಳೆದ ಬಾರಿ ಜಾತ್ರೆ ನಡೆದಿರಲಿಲ್ಲ. ಆದರೆ, ಈ ಬಾರಿ ದೇವಸ್ಥಾನ ಜೀರ್ಣೋದ್ಧಾರ ಪೂರ್ಣಗೊಂಡಿದ್ದರಿಂದ ಷಷ್ಠಿ ಜಾತ್ರೆಯನ್ನು ಆಚರಿಸಲಾಯಿತು.
ಷಷ್ಠಿ ಜಾತ್ರೆ ಪ್ರಯುಕ್ತ ನಡೆದ ವಿಶೇಷ ಪೂಜೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು. ಮುಂಜಾನೆಯಿಂದ ತಡರಾತ್ರಿವರೆಗೆ ಮೈಸೂರು ಸೇರಿದಂತೆ ದೂರದ ಊರುಗಳಿಂದ ಸಾವಿರಾರು ಭಕ್ತರು ತಂಡೋಪತಂಡವಾಗಿ ಆಗಮಿಸಿ ದೇವರ ದರ್ಶನ ಪಡೆದರು.ಶನಿವಾರ ಬೆಳಗಿನ ಜಾವ 2 ಗಂಟೆಯಿಂದಲೇ ಶ್ರೀ ಸುಬ್ರಹ್ಮಣೇಶ್ವರ ಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರನಾಮಾರ್ಚನೆ, ಅಷ್ಟವಧಾನ ಪೂಜೆ ನಂತರ ಹಾಲು, ಮೊಸರು, ಜೇನುತುಪ್ಪ, ಬೆಣ್ಣೆ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ಮಾಡಲಾಯಿತು.
ಶುಕ್ರವಾರ ರಾತ್ರಿಯೇ ಪೊಲೀಸ್ ಬಂದೋಬಸ್ತ್ ನಲ್ಲಿ ಮೈಸೂರು ಅರಮನೆಯಿಂದ ತಂದು ಇರಿಸಲಾಗಿದ್ದ ಬೆಳ್ಳಿ ನಾಗಾಭರಣವನ್ನು ತಹಸೀಲ್ದಾರ್, ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಸಮ್ಮುಖದಲ್ಲಿ ದೇವರಿಗೆ ಧರಿಸಿ ಅಲಂಕಾರ ಮಾಡಲಾಯಿತು. ನಂತರ ಬೆಳ್ಳಿ ನಾಗಾಭರಣ ಧರಿಸಿದ ಸುಬ್ರಹ್ಮಣೇಶ್ವರಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿ, ಮಹಾಮಂಗಳಾರತಿ ನಡೆದ ಬಳಿಕ 3.30 ರಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.ಮಹಾರಾಜರ ಕಾಲದಿಂದಲೂ ಈ ದೇವರಿಗೆ ಧರಿಸಲೆಂದು ವಿಶೇಷವಾಗಿ ಬೆಳ್ಳಿ ನಾಗಾಭರಣ ಮಾಡಿಸಲಾಗಿದ್ದು, ಅದನ್ನು ಸಂಪ್ರದಾಯದಂತೆ ಪ್ರತಿ ವರ್ಷ ಷಷ್ಠಿ ಹಬ್ಬದ ದಿನದಂದು ಧರಿಸುವುದು ವಾಡಿಕೆಯಾಗಿದೆ. ಮುಂಜಾನೆಯಿಂದಲೇ ಸಾರ್ವಜನಿಕರು ದೇವರ ದರ್ಶನ ಪಡೆದರು.
ರಥೋತ್ಸವ:ಮಧ್ಯಾಹ್ನ 12.30ರ ಹೊತ್ತಿಗೆ ಸುಬ್ರಹ್ಮಣೇಶ್ವರಸ್ವಾಮಿಯ ರಥೋತ್ಸವ ಅತ್ಯಂತ ವೈಭವದಿಂದ ಜರುಗಿತು. ವಿಶೇಷವಾಗಿ ಅಲಂಕರಿಸಿದ್ದ ರಥೋತ್ಸವದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ರಾಷ್ಟ್ರೀಯ ಹೆದ್ದಾರಿಯ ಮೂಲಕವೇ ಸಿದ್ದಲಿಂಗಪುರದ ಚಂದ್ರಮೌಳೇಶ್ವರಸ್ವಾಮಿ ದೇವಾಲಯದವರೆಗೆ ರಥೋತ್ಸವ ನಡೆಯಿತು. ನಂತರ, ಅದೇ ಮಾರ್ಗವಾಗಿ ವಾಪಸ್ ದೇವಸ್ಥಾನ ತಲುಪಿತು.
ಸುಬ್ರಹ್ಮಣ್ಯ ಷಷ್ಠಿ ಜಾತ್ರೆ ಪ್ರಯುಕ್ತ ಪ್ರತಿವರ್ಷವೂ ವಿಶೇಷವಾಗಿ ದೇವರ ದರ್ಶನ ಪಡೆಯುವುದು ಸಂಪ್ರದಾಯವಾಗಿದೆ. ಅದರಂತೆ ಮೈಸೂರು, ಸಿದ್ದಲಿಂಗಪುರ, ಕಳಸ್ತವಾಡಿ, ಶ್ರೀರಂಗಪಟ್ಟಣ, ಹೆಬ್ಬಾಳು, ಕುಂಬಾರಕೊಪ್ಪಲು, ಮೇಟಗಳ್ಳಿ, ಯರಗನಹಳ್ಳಿ, ಪಾಲಹಳ್ಳಿ, ಕೆಆರ್ ಎಸ್ ಸುತ್ತಮುತ್ತಲ ಹಳ್ಳಿಗಳಿಂದ ಭಕ್ತರು ಮುಂಜಾನೆಯಿಂದಲೇ ಹರಿದು ಬರ ತೊಡಗಿದರು. ಚಳಿಯನ್ನು ಲೆಕ್ಕಿಸದೆ ಸಾಲಿನಲ್ಲಿ ನಿಂತು ದರ್ಶನ ಪಡೆದರು.ಹರಕೆ ಹೊತ್ತ ಭಕ್ತರು ನಾಗರ ಹುತ್ತಕ್ಕೆ ಹಾಲು- ಬೆಣ್ಣೆ ತನಿ ಎರೆದರೆ, ಕೆಲವರು ಬೆಳ್ಳಿ ನಾಗರವನ್ನು ಹುತ್ತಕ್ಕೆ ಬಿಡುತ್ತಿದ್ದುದು ಸಾಮಾನ್ಯವಾಗಿತ್ತು. ಅನೇಕರು ದೇವಸ್ಥಾನದ ಹಿಂಭಾಗ ಹುತ್ತಕ್ಕೆ ಹಾಲು- ಬೆಣ್ಣೆ ತನಿ ಎರೆಯುತ್ತಿದ್ದರಿಂದ ಭರ್ಜರಿಯಾಗಿ ಹಾಲು, ಬೆಣ್ಣೆ ಮಾರಾಟವಾಯಿತು.
ನಾಗರವನ್ನು ಹುತ್ತಕ್ಕೆ ಬಿಟ್ಟರೆ ಕಷ್ಟಗಳೆಲ್ಲವೂ ಪಾರಾಗಲಿದೆ ಎನ್ನುವ ನಂಬಿಕೆಯಿಂದಾಗಿ ಹಿರಿಯರು- ಕಿರಿಯರು ಎನ್ನದೇ ಖರೀದಿಸಿ ಹುತ್ತಕ್ಕೆ ಹಾಕಿ ಕೈ ಮುಗಿಯುತ್ತಿದ್ದು ಸರ್ವೇ ಸಾಮಾನ್ಯವಾಗಿತ್ತು.ದೇವರ ದರ್ಶನಕ್ಕೆ ಭಕ್ತರು ಮುಗಿ ಬಿದ್ದ ಕಾರಣಕ್ಕಾಗಿ ಪೊಲೀಸರು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ದೇವಸ್ಥಾನದ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.
ನಗರದ ವಿವಿಧೆಡೆ ಷಷ್ಠಿ ಆಚರಣೆ:ನಗರದ ವಿವಿಧೆಡೆ ಹುತ್ತಕ್ಕೆ ಹಾಗೂ ನಾಗರ ಕಲ್ಲಿಗೆ ಹಾಲೆರೆದು ಪೂಜೆ ಸಲ್ಲಿಸುವ ಮೂಲಕ ಭಕ್ತರು ಷಷ್ಠಿ ಆಚರಿಸಿದರು.
ವಿದ್ಯಾರಣ್ಯಪುರಂನ ಬೂತಾಳೆ ಮೈದಾನ, ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನ, ಕುರುಬಾರಹಳ್ಳಿ ಬನ್ನಿಮಹಾಕಾಳೇಶ್ವರಿ ದೇವಸ್ಥಾನ ಬಳಿ, ಅಗ್ರಹಾರ ಗಣಪತಿ ದೇವಸ್ಥಾನ, ಕೆ.ಜಿ. ಕೊಪ್ಪಲಿನ ಬಂದಂತಮ್ಮ ದೇವಾಲಯ, ಜಿಲ್ಲಾಧಿಕಾರಿ ಕಚೇರಿ ಸಮೀಪದ ಕಾಡುಮಲ್ಲೇಶ್ವರ ದೇವಸ್ಥಾನ, ಜನತಾನಗರದ ಬಿಸಿಲುಮಾರಮ್ಮ ದೇವಸ್ಥಾನ ಸೇರಿದಂತೆ ವಿವಿಧ ಬಡಾವಣೆಗಳಲ್ಲೂ ಭಕ್ತರು ಹುತ್ತ ಹಾಗೂ ನಾಗರ ಕಲ್ಲಿಗೆ ಹಾಲೆರೆದು ಪೂಜೆ ಸಲ್ಲಿಸಿದರು.ಕೆಲವೆಡೆ ನೈವೇಧ್ಯಕ್ಕೆ ಮನೆಯಿಂದ ಮಾಡಿಕೊಂಡು ಬಂದಿದ್ದ ತಿಂಡಿ, ತಿನಿಸು, ಹಣ್ಣನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸಿದರು. ಕೆಲವು ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ಸಹ ಜರುಗಿತು.