ಐಪಿಎಲ್‌ನಲ್ಲಿ ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆ ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದ್ದು, ಮಂಗಳವಾರ ತಡರಾತ್ರಿವರೆಗೂ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಐಪಿಎಲ್‌ನಲ್ಲಿ ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆ ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದ್ದು, ಮಂಗಳವಾರ ತಡರಾತ್ರಿವರೆಗೂ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ರಸ್ತೆಗಿಳಿದು ಆರ್‌ಸಿಬಿ, ಕೊಹ್ಲಿ ಪರ ಘೋಷಣೆಗಳನ್ನು ಕೂಗಿ, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಂಭ್ರಮಾಚರಣೆ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಶಿವಮೊಗ್ಗ, ಮಂಡ್ಯ, ಕಲಬುರಗಿ, ಬೆಳಗಾವಿ ಸೇರಿ ರಾಜ್ಯದ ಹಲವೆಡೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಸಂಸದ ರಾಜಶೇಖರ ಹಿಟ್ನಾಳ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಸಂಗಡಿಗರೊಂದಿಗೆ ಕುಣಿದು ಕುಪ್ಪಳಿಸಿ, ಆರ್‌ಸಿಬಿ ಗೆಲುವನ್ನು ಸಂಭ್ರಮಿಸಿದರು. ಧಾರವಾಡದ ಲೈನ್ ಬಜಾರ್‌ನಲ್ಲಿ ಅಭಿಮಾನಿಗಳು ಆರ್‌ಸಿಬಿ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ, ಕೇಕ್ ಕತ್ತರಿಸಿ, ಸಂಭ್ರಮಿಸಿದರು.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮದಲ್ಲಿ ಪರಮಾನಂದ‌ ಹಾಗೂ ಶೃತಿ ಎಂಬ ನವಜೋಡಿ ಆರ್‌ಸಿಬಿ ತಂಡದ ಜೆರ್ಸಿ ತೊಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಜಯಪುರದ ಹೋಟೆಲ್‌ವೊಂದು ತನ್ನ ಗ್ರಾಹಕರಿಗೆ ಬೆಳಗ್ಗೆ ಚೌಚೌಬಾತ್, ಮಧ್ಯಾಹ್ನ ಅನ್ನ, ಸಾಂಬಾರ್ ಮಿರ್ಚಿ ಊಟವನ್ನು ಉಚಿತವಾಗಿ ನೀಡಿತು. ಮೈಸೂರು, ಹಾವೇರಿಯಲ್ಲಿ ಅಭಿಮಾನಿಗಳಿಗೆ ವಿಶೇಷ ಹೋಳಿಗೆ ಊಟ ಹಾಕಿಸಲಾಯಿತು. ಕೆಲವೆಡೆ ದಾಸೋಹ ಏರ್ಪಡಿಸಲಾಗಿತ್ತು. ವಿದೇಶಗಳಲ್ಲೂ ಸಂಭ್ರಮ: ಆರ್‌ಸಿಬಿ ಗೆದ್ದಿದ್ದಕ್ಕೆ ಭಾರತದ ವಿವಿಧ ರಾಜ್ಯಗಳಲ್ಲದೆ ವಿದೇಶಗಳಲ್ಲೂ ಸಂಭ್ರಮಿಸಲಾಯಿತು. ಆಸ್ಟ್ರೇಲಿಯಾ, ಇಂಗ್ಲೆಂಡ್‌, ಅಮೆರಿಕ, ಜರ್ಮನಿ, ಕೆನಡಾ ಸೇರಿ ಹಲವು ದೇಶಗಳಲ್ಲಿ ಆರ್‌ಸಿಬಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.